ಸಮಗ್ರ ನ್ಯೂಸ್: ಜುಲೈ 18ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ದೇಶದ 15ನೇ ರಾಷ್ಟ್ರಪತಿಯಾಗಿ ಎನ್ ಡಿ ಎ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದ ಮಹಿಳೆಯೋರ್ವರು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎನ್ ಡಿ ಎ ಮೈತ್ರಿಕೂಟದಿಂದ ದ್ರೌಪದಿ ಮುರ್ಮು ಕಣಕ್ಕಿಳಿದಿದ್ದರೆ ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಸ್ಪರ್ಧಿಸಿದ್ದರು.
ದ್ರೌಪದಿ ಮುರ್ಮು ಅವರಿಗೆ ಯುಪಿಎ ಮೈತ್ರಿಕೂಟದಲ್ಲಿದ್ದ ಕೆಲವೊಂದು ಪಕ್ಷಗಳು ಬೆಂಬಲಿಸಿದ್ದು ಗಮನಾರ್ಹ. ಈ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಅವರು ಬಹುಮತದಿಂದ ಆಯ್ಕೆಯಾಗಿದ್ದು, ಪ್ರತಿಭಾ ಪಾಟೀಲ್ ಬಳಿಕ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ.
ಶೀಘ್ರ ನಿಕಟ ಪೂರ್ವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಅಧಿಕಾರ ಹಸ್ತಾಂತರವಾಗಲಿದ್ದು, ಮೊದಲ ಆದಿವಾಸಿ ಮಹಿಳೆ ದೇಶದ ಅತಿ ಶ್ರೇಷ್ಟ ಹುದ್ದೆಗೇರಲಿದ್ದಾರೆ. ಈಗಾಗಲೇ ಅವರ ಹುಟ್ಟೂರು ಜಾರ್ಖಂಡ್‌ನಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಎನ್‌ಡಿಎ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದಾಗಲೇ ಅವರು ಗೆಲ್ಲುವುದು ಖಚಿತ ಎನ್ನಲಾಗಿತ್ತು. ಇದೀಗ ಅವರ ಪ್ರತಿಸ್ಪರ್ಧಿ ಯಶ್ವಂತ್ ಸಿನ್ಹಾ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.