ಸಮಗ್ರ ನ್ಯೂಸ್: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿದೆ. ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ ಕೊಂಚ ಚೇತರಿಸಿಕೊಂಡು 16 ಪೈಸೆ ಇಳಿಕೆ ಆಗಿ ದಿನ ಅಂತ್ಯಕ್ಕೆ 79.98 ರೂ.ಗೆ ವಿನಿಮಯ ದರ ಸ್ಥಿರಗೊಂಡಿತು. ಮಂಗಳವಾರವೂ ಆರಂಭಿಕ ವಹಿವಾಟಿನಲ್ಲಿ ಶೇ.0.03 ಕುಸಿತದೊಂದಿಗೆ ಮತ್ತೆ 80.02 ರೂ. ಗಡಿ ದಾಟಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರದ ಏರಿಳಿತದಿಂದ ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರೂಪಾಯಿ ಅಧಃಪತನ ಮುಂದುವರಿದು ಈ ವರ್ಷದಲ್ಲಿ ಈವರೆಗೆ ಶೇ. 8ರಷ್ಟು ಕುಸಿತ ಕಂಡಿದೆ. ದೇಶದಲ್ಲಿ ವಿದೇಶಿ ಬಂಡವಾಳ ಹಿಂತೆಗೆತವು ಹೆಚ್ಚಾಗುತ್ತಿದೆ. ವಿದೇಶಿ ಹೂಡಿಕೆದಾರರು ರಾಷ್ಟ್ರದ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿರುವ ಕಾರಣದ ಭಾರತದ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಮುಟ್ಟಿದೆ.
ಕಳೆದ ಎಂಟು ವರ್ಷಗಳಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 16.08 (ಶೇ. 25.39) ಕುಸಿದಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಒಪ್ಪಿಕೊಂಡಿದೆ.
ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವು ದೇಶದಲ್ಲಿ ಹಣದುಬ್ಬರ ಮತ್ತು ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಿಶೇಷವಾಗಿ ತೈಲ ಮತ್ತು ಅನಿಲ ಬೆಲೆ ಹೆಚ್ಚಲಿದೆ. ದೇಶದ ಅವಶ್ಯಕ ಇರುವ ತೈಲ ಪ್ರಮಾಣದಲ್ಲಿ ಶೇ. 80 ಹೊರಗಿನಿಂದ ಬರುತ್ತದೆ. ಇದರ ಖರೀದಿಗೆ ಹೆಚ್ಚು ಹಣ ವ್ಯಯ ಆಗಲಿದೆ. ವೇಗವಾಗಿ ಬಿಕರಿಯಾಗುವ ಸಾಮಗ್ರಿಗಳ ವಲಯದಲ್ಲಿ ಮಾರಾಟ ಇಳಿಕೆ ಆಗುವ ಸಾಧ್ಯತೆ ಇದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದ ಕಾರಣ ಶೇ. 15ರಷ್ಟು ಏರಿಕೆ ಸಂಭವ ಇದೆ. ಭಾರತ 1.35 ಕೋಟಿ ಟನ್ ಲೀಟರ್ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 63ರಷ್ಟು ಬೇಡಿಕೆ ತಾಳೆ ಎಣ್ಣೆಗೆ ಇದೆ. ಏರ್ಲೈನ್ಸ್ ನಿರ್ವಹಣೆ ದುಬಾರಿಯಾಗಲಿದೆ. ದೇಶ- ವಿದೇಶದಲ್ಲಿ ಪಡೆಯುವ ವೈಮಾನಿಕ ಸೇವೆಗಳಿಗೆ ಡಾಲರ್ನಲ್ಲಿ ಪಾವತಿಸಬೇಕಿರುವ ಕಾರಣ ಖರ್ಚಿನ ಬಾಬ್ತು ಅಧಿಕವಾಗಲಿದೆ. ಆಮದು ಮಾಡಿಕೊಳ್ಳು ಎಲೆಕ್ಟ್ರಾನಿಕ್ಸ್ ವಸ್ತುಗಳು, ಸ್ಮಾರ್ಟ್ ಫೋನ್ಗಳು ಬೆಲೆ ಏರಿದೆ. ತೈಲ ದರ ಏರಿಕೆಯ ಕಾರಣ ಸಿಮೆಂಟ್ ದರ, ಸರಕು ಸಾಗಣೆ ವೆಚ್ಚದಲ್ಲಿ ಹೆಚ್ಚಳ ಆಗುವ ಸಂಭವ ಇದೆ.