ಸಮಗ್ರ ನ್ಯೂಸ್: ಕೆಲವೊಂದು ಸರ್ಕಾರಿ ಅನುದಾನಗಳನ್ನು ಪಡೆದುಕೊಳ್ಳಲು ಸ್ಥಳೀಯ ಶಾಸಕರ ಶಿಫಾರಸ್ಸು ಅಗತ್ಯ ಬೇಕಾಗಿರುತ್ತದೆ. ಹಾಗಾಗಿ ಬಡಜನರು ಯೋಜನೆಗಳ ಅನುದಾನಕ್ಕಾಗಿ ಕ್ಷೇತ್ರದ ಶಾಸಕರ ಕಚೇರಿ ಬಾಗಿಲು ತಟ್ಟುವುದು ಸಾಮಾನ್ಯ. ಆದರೆ ಸಂವಿಧಾನಾತ್ಮಕವಾಗಿ ಆಯ್ಕೆಯಾದ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರಿಗಷ್ಟೇ ಶಿಫಾರಸ್ಸು ಮಾಡ್ತಾರೆ ಅಂದ್ರೆ ನಂಬ್ತೀರಾ? ನೀವು ನಂಬಲೇಬೇಕು. ನಮ್ಮ ಸುಳ್ಯ ಶಾಸಕರು ಹಾಗೂ ಪ್ರಸ್ತುತ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರು ಮಾತ್ರ ಬಿಜೆಪಿ ಕಾರ್ಯಕರ್ತ ಅಥವಾ ಆ ಪಕ್ಷಕ್ಕೆ ಓಟು ಹಾಕಿದವರಿಗಷ್ಟೇ ಯಾವುದೇ ಅನುದಾನಕ್ಕೆ ಶಿಫಾರಸ್ಸು ಮಾಡ್ತಾರಂತೆ.
ಹೌದು, ಸುಳ್ಯ ವಿಧಾನಸಭಾ ವ್ಯಾಪ್ತಿಯ ಆಲೆಟ್ಟಿ ಗ್ರಾಮದ ರಂಗತ್ತಮಲೆಯ ವಿಶೇಷ ಚೇತನ ರಾಮಚಂದ್ರ ನಾಯ್ಕ ಎಂಬವರು ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯ ಮಂಜೂರಾತಿಗಾಗಿ ಶಾಸಕರ ಶಿಫಾರಸು ಪತ್ರ ಬೇಕಿತ್ತು. ಇದಕ್ಕಾಗಿ ರಾಮಚಂದ್ರ ನಾಯ್ಕರು ಶಾಸಕರ ಕಚೇರಿಗೆ ಹೋಗಿದ್ದು, ಕಚೇರಿ ಸಹಾಯಕರಲ್ಲಿ ಕಡತ ನೀಡಿದ್ದಾರೆ. ಅದಾದ ಬಳಿಕ ಶಾಸಕರ ಮನೆಗೆ ಹೋಗಿ ಮಾತನಾಡಿದಾಗ ಸಹಿ ಮಾಡುತ್ತೇನೆ ಎಂದು ಹೇಳಿದರೂ ಮಾಡಿರಲಿಲ್ಲ.
ಈ ಸಂಬಂಧ ಅಂಬೇಡ್ಕರ್ ರಕ್ಷಣಾ ವೇದಿಕೆ ಅಧ್ಯಕ್ಷ ಸುಂದರ ಪಾಟಾಜೆ ಶಾಸಕರ ಆಪ್ತರೋರ್ವರಿಗೆ ಕರೆ ಮಾಡಿದ್ದು, ಕಡತದ ಬಗ್ಗೆ ವಿಚಾರಿಸಿದಾಗ ಹೊಸದೊಂದು ಮಾಹಿತಿ ಲಭ್ಯವಾಗಿದೆ. ಅದೇನೆಂದರೆ ಶಾಸಕರು ರಾಮಚಂದ್ರ ನಾಯ್ಕರ ಕುರಿತಾಗಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಜೊತೆ ವಿಚಾರಿಸಿದ್ದು, ಈ ವೇಳೆ ರಾಮಚಂದ್ರರು ಕಾಂಗ್ರೆಸ್ ಬೆಂಬಲಿಗರೆಂಬುದು ಗೊತ್ತಾಗಿದೆ. ಇದೇ ಕಾರಣವನ್ನಿಟ್ಟುಕೊಂಡು ಕಡತಕ್ಕೆ ಶಿಫಾರಸು ನೀಡಿರಲಿಲ್ಲ ಎಂದು ಹೇಳಿರುವ ಆಡಿಯೋ ತುಣುಕು ”ಸಮಗ್ರ ಸಮಾಚಾರ”ಕ್ಕೆ ಲಭ್ಯವಾಗಿದೆ.
ಶಾಸನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿಯೋರ್ವರು ಅನುದಾನಗಳ ಮಂಜೂರಾತಿಗೆ ಶಿಪಾರಸ್ಸು ಮಾಡುವಾಗ ಪಕ್ಷಾತೀತವಾಗಿ ಚಿಂತಿಸಬೇಕಾದ್ದು ನ್ಯಾಯಸಮ್ಮತ. ಆದರೆ ಆತ ಇನ್ನೊಂದು ಪಕ್ಷದ ಕಾರ್ಯಕರ್ತ ಎಂಬ ಕಾರಣಕ್ಕೆ ಕಡತಗಳನ್ನು ತಿರಸ್ಕರಿಸುವುದು ಯಾವ ನ್ಯಾಯ? ಇದರಿಂದಾಗಿ ಈ ವರ್ಷದ ಮಟ್ಟಿಗೆ ಯೋಜನೆಯ ಅನುದಾನ ಲ್ಯಾಪ್ಸ್ ಆಗಿದ್ದು, ವಿಕಲಚೇತನ ಮತ್ತು ದಲಿತರಾಗಿರುವ ರಾಮಚಂದ್ರ ನಾಯ್ಕರಿಗೆ ಅನ್ಯಾಯವಾಗಿದೆ. ಇದು ದಲಿತ ಜನಾಂಗದ ಪ್ರತಿನಿಧಿ ಹಾಗೂ ಸಚಿವರಾಗಿರುವ ಎಸ್.ಅಂಗಾರರ ಮಲತಾಯಿ ದೋರಣೆ ಎಂದು ಸುಂದರ ಪಾಟಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರ ಆಪ್ತರೊಂದಿಗಿನ ಆಡಿಯೋ ಇಲ್ಲಿದೆ
ಈ ಕುರಿತಂತೆ ಸುಳ್ಯ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರೇ ಸ್ಪಷ್ಟನೆ ನೀಡಬೇಕಿದೆ.