ಸಮಗ್ರ ನ್ಯೂಸ್: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಚೀನಾದ ವಾಂಗ್ ಝಿ ಯಿ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿದ್ದರು. ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದುಕೊಂಡರು. ಇದಾಗ್ಯೂ 2ನೇ ಸೆಟ್ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್ನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಕಲೆಹಾಕಿ ಒತ್ತಡಕ್ಕೆ ಸಿಲುಕಿಸಿದ್ದರು. ಪರಿಣಾಮ ಎರಡನೇ ಸೆಟ್ ಅನ್ನು ಪಿವಿ ಸಿಂಧು 11-21 ಅಂತರದಿಂದ ಸೋತರು.
ಮೊದಲೆರಡು ಸೆಟ್ಗಳಲ್ಲಿ ಇಬ್ಬರಿಂದಲೂ ಭರ್ಜರಿ ಪ್ರದರ್ಶನ ಮೂಡಿಬಂದಿದ್ದ ಕಾರಣ ಅಂತಿಮ ಸೆಟ್ನಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಮೊದಲ 5 ಪಾಯಿಂಟ್ವರೆಗೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಈ ಹಂತದಲ್ಲಿ ತಮ್ಮ ಅನುಭವವನ್ನು ಧಾರೆಯೆರೆದ ಸಿಂಧು ಸ್ಮ್ಯಾಶ್ ಮೂಲಕ ವಾಂಗ್ ಝಿ ಯಿಯನ್ನು ಇಕ್ಕಟ್ಟಿಗೆ ಸಿಲುಕಿದರು. ಪರಿಣಾಮ ಏಕಾಏಕಿ ಸಿಂಧು ಅವರ ಪಾಯಿಂಟ್ 11 ಕ್ಕೇರಿದರೆ, ಝಿ 6 ರಲ್ಲೇ ಉಳಿದರು. ಆದರೆ ಈ ಹಂತದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಅಲ್ಲದೆ ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು.
ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಮತ್ತೊಮ್ಮೆ ತಮ್ಮ ಬ್ಯಾಕ್ ಜಂಪ್ ಸ್ಯಾಶ್ ಮೂಲಕ ವಾಂಗ್ ಝಿ ವಿರುದ್ದ ಮೇಲುಗೈ ಹೊಂದಿದರು. ಅಂತಿಮವಾಗಿ 21-15 ರ ಅಂತರದಿಂದ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.