ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅನೇಕರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿಚಾರವಾಗಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಸಿಎಂ ಬೊಮ್ಮಾಯಿ ತಕ್ಷಣವೇ ಆದೇಶ ವಾಪಸ್ ಪಡೆಯುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಆದೇಶ ಹಿಂಪಡೆಯಲಾಗಿತ್ತು. ಆದರೆ ಸರ್ಕಾರಿ ಕಚೇರಿಯಲ್ಲಿ ಫೋಟೊ , ವಿಡಿಯೋ ಚಿತ್ರೀಕರಣ ಬ್ಯಾನ್ ಆದೇಶ ವಾಪಸ್ ಪಡೆದಿರುವ ಆದೇಶ ಪತ್ರದ ಪತ್ರಿಯೊಂದು ಸಾಲಿನಲ್ಲಿಯೂ ಕನ್ನಡ ಅಕ್ಷರಗಳನ್ನು ಕೊಲ್ಲಲಾಗಿದೆ. ಇಡೀ ಆದೇಶ ಪ್ರತಿಯಲ್ಲಿ ಹಲವಾರು ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಟೈಪ್ ಮಾಡಲಾಗಿದೆ. ತಪ್ಪು ತಪ್ಪು ಅಕ್ಷರಗಳಿರುವ ಸರ್ಕಾರ ಆದೇಶ ಪತ್ರವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸರ್ಕಾರಿ ಆದೇಶ ಪತ್ರದಲ್ಲಿಯೇ ಕನ್ನಡ ಕಗ್ಗೊಲೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ವಿಧಾನಸೌಧಕ್ಕೆ ಬಂದು ನಿದ್ದೆ ಗಣ್ಣಿನಲ್ಲಿ ಅಧಿಕಾರಿ ಆದೇಶ ಪತ್ರವನ್ನು ಟೈಪ್ ಮಾಡಿದ್ರಾ? ಅಥವಾ ಆ ಅಧಿಕಾರಿಗೆ ಶುದ್ಧ ಕನ್ನಡದ ಗಂಧ ಗಾಳಿಯೇ ಗೊತ್ತಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸರ್ಕಾರಿ ಆದೇಶ ಪತ್ರದಲ್ಲಿರುವ ತಪ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಲಾಖೆ ತಪ್ಪಾದ ಪದಗಳನ್ನು ಸರಿಪಡಿಸಿ ಮತ್ತೆ ಹೊಸದಾಗಿ ಆದೇಶ ಪತ್ರ ಬಿಡುಗಡೆಗೊಳಿಸಿದೆ.