ಸಮಗ್ರ ನ್ಯೂಸ್ : ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ ರವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ನಗರದ ಕಾವೂರು ಶಂಕರ ನಗರ ಕೆ ಸಿ ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ನಡೆಸಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿದ ಕುಖ್ಯಾತ ಆರೋಪಿ ವಿಖ್ಯಾತ್ @ ವಿಕ್ಕಿ ಬಪ್ಪಾಲ್, ಅಂಜನಾಳನ್ನು ಬಂಧಿಸಿದ್ದಾರೆ.
ಇವರಿಂದ ಒಟ್ಟು 2,200 ಕೆ ಜಿ ತೂಕದ ರೂ. 22,000/- ಮೌಲ್ಯದ ಗಾಂಜಾ, ನಗದು ರೂ. 1,500/- ಮೊಬೈಲ್ ಫೋನ್-1 ಮತ್ತು ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 92,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿರುತ್ತದೆ.
ಆರೋಪಿ ವಿಖ್ಯಾತ್ @ ವಿಕ್ಕಿ ಬಪ್ಪಾಲ್ ಎಂಬಾತನ ವಿರುದ್ದ ಈ ಹಿಂದೆ ಮಂಗಳೂರು ನಗರದ ದಕ್ಷಿಣ, ಉತ್ತರ, ಬರ್ಕೆ, ಉರ್ವಾ, ಗ್ರಾಮಾಂತರ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಾಗೂ ಕಿಡ್ನಾಫ್ ಗೆ ಸಂಬಂಧಪಟ್ಟಂತೆ ಒಟ್ಟು 13 ಪ್ರಕರಣಗಳು ದಾಖಲಾಗಿರುತ್ತದೆ.
ಅಂಜನಾ ಎಂಬಾಕೆಯ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಹಾಗೂ ಆತನ ಪತ್ನಿ ಜೊತೆ ಸೇರಿಕೊಂಡು ಮಂಗಳೂರು ನಗರದ ಎಂ ಜಿ ರಸ್ತೆಯಲ್ಲಿರುವ ವಿದ್ಯಾಸಂಸ್ಥೆಗಳ ಪರಿಸರದಲ್ಲಿ, ಕೆಪಿಟಿ, ಕದ್ರಿ, ಜೆಪ್ಪು ಬಪ್ಪಾಲ್ ಪರಿಸರದಲ್ಲಿ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.