ಸಮಗ್ರ ನ್ಯೂಸ್: ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಜ್ಞಾನವಾಪಿ ಮಾದರಿಯಂತೆ ಹೈಕೋರ್ಟ್ ಕೂಡ ಕಮಿಷನರ್ ನೇಮಕ ಮಾಡಬೇಕೆಂದು ಹಿಂದು ಮುಖಂಡರು ಅರ್ಜಿ ಸಲ್ಲಿಸಿದ್ದರು. ಹಾಗೇ ಅರ್ಜಿ ಸಿಂಧುತ್ವ ತೀರ್ಮಾನಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಿದ್ದರು.
ಅರ್ಜಿಗೆ ಜುಮ್ಮಾ ಮಸೀದಿ ಪರ ವಕೀಲ ಸಿರಿಲ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದು, ವಿಚಾರಣಾ ನ್ಯಾಯಾಲಯ ಅರ್ಜಿ ಸಿಂಧುತ್ವದ ಬಗ್ಗೆ ನಿರ್ಧರಿಸಬೇಕು. ಅರ್ಜಿ ಊರ್ಜಿತವಾಗದೇ ಕೋರ್ಟ್ ಕಮಿಷನರ್ ನೇಮಿಸಲಾಗದು ಎಂದು ಜುಮ್ಮಾ ಮಸೀದಿ ಪರ ವಕೀಲ ಸಿರಿಲ್ ಪ್ರಸಾದ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಹಿಂದೂ ಅರ್ಜಿದಾರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಏನಿದು ವಿವಾದ?
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ನವೀಕರಣಕಕ್ಕಾಗಿ ದರ್ಗಾದ ಮುಂಭಾಗ ಕೆಡವಲಾಗಿತ್ತು. ದರ್ಗಾದ ಹಿಂಭಾಗದಲ್ಲಿ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಬಹುಶಃ, ಇದು ಜೈನ ಬಸದಿ ಅಥವಾ ದೇವಸ್ಥಾನದ ಅವಶೇಷ ಆಗಿರಬಹುದು ಎಂದು ಹಿಂದುತ್ವಪರ ಸಂಘಟನೆಗಳು ಶಂಕಿಸಿವೆ.