ಸಮಗ್ರ ನ್ಯೂಸ್: ಭಾರೀ ಮಳೆಯ ಪರಿಣಾಮ ಕೊಡಗು ಜಿಲ್ಲೆಯ ಹಲವೆಡೆ ಜನಜೀವನ ಮತ್ತೆ ಅಸ್ತವ್ಯಸ್ಥಗೊಂಡಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೂರನೇ ಬಾರಿ ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ.
ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮಡಿಕೇರಿ ತಾಲೂಕಿನ ಬಲಮುರಿ ಕೆಳ ಸೇತುವೆ ಮುಳುಗಡೆಗೊಂಡಿದ್ದು 2 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದ ಭೀತಿಯಿರುವ ತೋರದ 14 ಕುಟುಂಬದ 34 ಜನರನ್ನು ತೋರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜು,15, 16ರಂದು ರಜೆ ಘೋಷಿಸಲಾಗಿದೆ.