ಸಮಗ್ರ ನ್ಯೂಸ್ : ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರಿಗೆ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಿಗೆ ಅಕ್ಕಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ.
ಈ ಜಿಲ್ಲೆಗಳ ಜನರಿಗೆ ಕುಚ್ಚಿಗೆ ಅಕ್ಕಿ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದ್ದು, ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ವಿಧಾನಸೌಧದಲ್ಲಿ ಗುರುವಾರ ಈ ಕುರಿತು ಸಭೆ ನಡೆಸಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯದ ನಿಯೋಗ ಈಗಾಗಲೇ ಕೇರಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಇದಕ್ಕಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತೀ ತಿಂಗಳು 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದ್ದು, ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಆಗುತ್ತದೆ. ವರ್ಷಕ್ಕೆ ಸುಮಾರು 18 ಲಕ್ಷ ಕ್ವಿಂಟಾಲ್ ಭತ್ತದ ಅಗತ್ಯ ಬೀಳುತ್ತದೆ ಎಂದು ತಿಳಿಸಿದರು.
ಜಯ, ಜ್ಯೋತಿ, ಎಂಎಫ್ 4ರಂತಹ ಭತ್ತದ ತಳಿಗಳಿಂದ ಮಾತ್ರ ಕುಚ್ಚಿಗೆ ಅಕ್ಕಿ ಮಾಡಲು ಸಾಧ್ಯವಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಎರಡೂವರೆ ಲಕ್ಷ ಕ್ವಿಂಟಾಲ್ ಭತ್ತ ಮಾತ್ರ ಉತ್ಪಾದನೆಯಾಗುತ್ತಿದೆ. ಇನ್ನುಳಿದದ್ದನ್ನು ಮೈಸೂರು, ಮಂಡ್ಯ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಿಂದ ಖರೀದಿಸಲು ಕ್ರಮ ಕೈಗೊಳ್ಳಲಾಗು ವುದು. ಆದರೂ ಇದು ಸಾಲದು ಎಂದರು.
ಹೆಚ್ಚಿನ ಅಗತ್ಯವಿರುವ ಭತ್ತವನ್ನು ಕೇರಳ ಮತ್ತು ತೆಲಂಗಾಣ ರಾಜ್ಯಗಳಿಂದ ಪಡೆಯಲು ಯೋಜಿಸ ಲಾಗಿದೆ. ಈ ಬಗ್ಗೆ ಈ ವಾರಾಂತ್ಯದಲ್ಲಿ ಮತ್ತೊಂದು ಅಧ್ಯಯನ ತಂಡ ತೆಲಂಗಾಣಕ್ಕೆ ಭೇಟಿ ನೀಡಲಿದೆ.
ಅಧ್ಯಯನ ತಂಡಗಳ ವರದಿ ಆಧರಿಸಿ ಕರಾವಳಿ ಜಿಲ್ಲೆಗಳ ಶಾಸಕರು ಮತ್ತು ಸಂಸದರ ನಿಯೋಗದೊಂದಿಗೆ ಸಿಎಂ ಅವರನ್ನು ಭೇಟಿಯಾಗಿ ಬರುವ ವರ್ಷದಿಂದಲೇ ಕುಚ್ಚಿಗೆ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.