ಸಮಗ್ರ ನ್ಯೂಸ್: ತಡರಾತ್ರಿ ಸುಟ್ಟು ಕರಕಲಾಗಿದ್ದ ಕಾರಿನೊಳಗೆ ಪೂರ್ಣ ಸುಟ್ಟ ಅಸ್ಥಿಪಂಜರವೊಂದು ಬೆಳಗ್ಗಿನ ಜಾವ ಕಾಣಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಪೊಲೀಸರು 24 ಗಂಟೆಯೊಳಗೆ ತನಿಖೆ ಮಾಡಿದ್ದಾರೆ. ತನಿಖೆಯಾಗುತ್ತಾ ಹೊರಬಂದ ಸತ್ಯಕ್ಕೆ ಇಡೀ ಉಡುಪಿ ಶಾಕ್ ಗೆ ಒಳಗಾಗಿದೆ.
ಸುಟ್ಟು ಕರಕಲಾದ ಕಾರು. ಕಾರಿನೊಳಗೆ ತಲೆಬುರುಡೆ ಎಲುಬು. ಪುಟ್ಟದಾದರೂ ಕ್ಲೂ ಸಿಗುತ್ತಾ ಅಂತ ಹುಡುಕಾಡುತ್ತಿರೋ ಪೊಲೀಸರು. ಈ ದೃಶ್ಯ ಕಂಡುಬಂದಿದ್ದು ಜಿಲ್ಲೆಯ ಹೇನಬೇರು ಗ್ರಾಮದಲ್ಲಿ. ಇಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಶವ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಅದು ಪುರುಷನದ್ದೇ ಅಥವಾ ಮಹಿಳೆಯ ಮೃತದೇಹವೇ ಎಂಬುದು ಗುರುತು ಸಿಕ್ಕಿರಲಿಲ್ಲ. ಕಾರಿನ ಚೇಸ್ ನಂಬರ್ ತೆಗೆದು ನೋಡಿದಾಗ ಇದು ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ ಎಂಬವರ ಕಾರು ಎಂದು ಗೊತ್ತಾಗಿದೆ.
ತನಿಖೆಗಾಗಿ ಉಡುಪಿ ಎಸ್ಪಿ ವಿಷ್ಣುವರ್ಧನ್ ಪೊಲೀಸರ 2 ತಂಡಗಳನ್ನು ರಚಿಸಿದರು. ಬೈಂದೂರು, ಕಾರ್ಕಳ ಪೊಲೀಸರು ಅಲರ್ಟ್ ಆಗಿ ತನಿಖೆ ಮಾಡಿದಾಗ ಸಾಸ್ತಾನ ಟೋಲ್‍ನಲ್ಲಿ ಸುಟ್ಟ ಕಾರು ಮಂಗಳವಾರ ರಾತ್ರಿ ಪಾಸ್ ಆಗಿದ್ದು, ಕಾರಿನಿಂದ ಮಹಿಳೆಯೊಬ್ಬಳು ಇಳಿದು ಟೋಲ್ ಹಣ ಕಟ್ಟಿದ್ದು ಗೊತ್ತಾಗಿದೆ. ಆಗ ಆ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಸ್ಟೋರಿ ಟರ್ನ್ ಪಡೆದುಕೊಳ್ಳುತ್ತದೆ. ಆದರೆ ಪೊಲೀಸರ ತನಿಖೆಯಲ್ಲಿ ಸದಾನಂದ ಮತ್ತು ಶಿಲ್ಪಾ ಸತ್ತಿಲ್ಲ ಬದುಕಿದ್ದಾರೆ ಎಂದು ಗೊತ್ತಾಗುತ್ತದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು.
ಸದಾನಂದ ಪರವಾನಗಿ ಪಡೆದ ಸರ್ವೇಯರ್. ಕೆಲವು ದಿನಗಳ ಹಿಂದೆ ಭೂ ದಾಖಲೆಗಳನ್ನು ಫೋರ್ಜರಿ ಮಾಡಿದ್ದ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋರ್ಟ್‌ನಲ್ಲಿ ಚಾರ್ಜ್‍ಶೀಟ್ ದಾಖಲಾಗಿತ್ತು. ವಿಚಾರಣೆ, ಕೋರ್ಟ್ ನೋಟೀಸ್, ಅರೆಸ್ಟ್ ವಾರೆಂಟ್ ಕೂಡ ಆಗಿತ್ತು. ಬಂಧನದ ಭೀತಿಯಲ್ಲಿದ್ದ ಸದಾನಂದ ಮತ್ತವನ ಗೆಳತಿ ಶಿಲ್ಪಾ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ತನ್ನ ವಯಸ್ಸಿನ ವ್ಯಕ್ತಿಯಾದ ಕಾರ್ಕಳದ ಆನಂದ ದೇವಾಡಿಗನನ್ನು ಆರಿಸಿದ್ದ ಸದಾನಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ನಿದ್ರೆ ಬರಿಸುವ ಮಾತ್ರೆ ಜೊತೆ ಮದ್ಯ ಕುಡಿಸಿ ಆನಂದ ದೇವಾಡಿಗನ ಸಹಿತವಾಗಿ ಕಾರನ್ನು ಸುಟ್ಟು ಹಾಕಿದರು.
ಸದಾನಂದ ಆತ್ಮಹತ್ಯೆ ಮಾಡಿಕೊಂಡ ಎಂದು ಬಿಂಬಿಸಿ ಎಸ್ಕೇಪ್ ಆಗಿಬಿಡುವುದು ಇಬ್ಬರ ಪ್ಲಾನ್ ಆಗಿತ್ತು. ಆದರೆ ಚಾಣಾಕ್ಷ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಸತ್ಯ ಪತ್ತೆ ಹಚ್ಚಿದ್ದಾರೆ. ಬೈಂದೂರಿನಿಂದ ಎಸ್ಕೇಪ್ ಆಗಲು ಇವರಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪದಡಿ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಬಳಿಕ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಲಿದೆ.