ಸಮಗ್ರ ನ್ಯೂಸ್: ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಅನ್ನೋದು ವಿಪಕ್ಷಗಳ ಪ್ರಮುಖ ಆರೋಪ.
ಸಾಮಾನ್ಯವಾಗಿ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳು ಸೌಮ್ಯ ಸಂದೇಶ ಸಾರುತ್ತವೆ. ಆದರೆ ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ ರೀತಿಯಲ್ಲಿ ಬಿಂಬಿಸಲಾಗಿದೆ. ಸಾಮಾನ್ಯ ಲಾಂಛನದಲ್ಲಿ ಸಿಂಹದ ಹಲ್ಲುಗಳು ಕಾಣಿಸಲ್ಲ. ಆದರೆ ಇಲ್ಲಿ ಸಿಂಹದ ಹಲ್ಲುಗಳು ಕಾಣಿಸುತ್ತಿವೆ ಎಂದು ಆರ್ಜೆಡಿ ಸೇರಿ ವಿಪಕ್ಷಗಳು ಆರೋಪಿಸಿವೆ. ಅಷ್ಟು ಮಾತ್ರವಲ್ಲ ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ಈ ಲಾಂಛನ ಅನಾವರಣ ಮಾಡಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆಯನ್ನೂ ಹಾಕಿದ್ದಾರೆ.
ಮೂಲ ರಾಷ್ಟ್ರೀಯ ಲಾಂಛನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಂಸತ್ ಮೇಲಿರುವುದು 3D ಮಾದರಿಯ ಲಾಂಛನ. ಇದಕ್ಕೆ 2D ಫೋಟೋ ಮೂಲಕ ಹೋಲಿಕೆ ಮಾಡಲಾಗುತ್ತಿದೆಯಷ್ಟೇ. ಸಾರನಾಥದಲ್ಲಿನ ಮೂಲ ಮಾದರಿಯಂತೆ ಲಾಂಛನ ರಚನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ ಬಿಜೆಪಿ, ಮೋದಿ ಈ ಲಾಂಛನ ಬಿಡುಗಡೆ ಮಾಡಿದ್ದೇಕೆ ಅನ್ನೋದಕ್ಕೂ ಸ್ಪಷ್ಟನೆ ಕೊಟ್ಟಿದೆ.
ಮೋದಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿಲ್ಲ ಎಂದು ಪ್ರತಿಪಕ್ಷಗಳನ್ನು ದೂರ ಇಟ್ಟಿದ್ದಾರೆಂದು ಸಹ ಟೀಕಿಸಿವೆ.
ಅನಗತ್ಯವಾಗಿ ಆಕ್ರಮಣಕಾರಿ ಸಿಂಹ ಬಳಸಲಾಗಿದೆ, ಇದು ಅಸಮಂಜಸವಾಗಿದೆ. ಅವಮಾನ ! ಕೂಡಲೇ ಅದನ್ನು ಬದಲಾಯಿಸಿ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್ ಅವರು ಟ್ವಿಟರ್‌ನಲ್ಲಿ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇತಿಹಾಸಕಾರ ಎಸ್. ಇರ್ಫಾನ್ ಹಬೀಬ್ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿರುವುದನ್ನು ವಿರೋಧಿಸಿದ್ದಾರೆ.