ಸಮಗ್ರ ನ್ಯೂಸ್: ನದಿ ದಡದಲ್ಲಿ ಆಟವಾಡುತ್ತಿದ್ದ 10 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಜನರು ಮೊಸಳೆಯನ್ನು ಹಿಡಿದಿದ್ದಾರೆ.
ಮೊಸಳೆಯ ಹೊಟ್ಟೆಯಲ್ಲಿ ಮಗು ಜೀವಂತವಾಗಿದೆ ಎಂದು ಮಗುವನ್ನು ಅದರ ಹೊಟ್ಟೆಯಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ಮಗುವಿನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ರಿಜೆಂತಾ ಗ್ರಾಮದ ನಿವಾಸಿ ಅತಾರ್ ಸಿಂಗ್ ಎಂಬ 10 ವರ್ಷದ ಬಾಲಕ ಮರಳಿನ ಮೇಲೆ ಆಟವಾಡುತ್ತಿದ್ದ.
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ನದಿಯಿಂದ ಹೊರಬಂದ ಮೊಸಳೆ ಮಗುವಿನ ಮೇಲೆ ದಾಳಿ ಮಾಡಿದೆ. ಮೊಸಳೆ ಮಗುವಿನ ಮೇಲೆ ದಾಳಿ ಮಾಡುತ್ತಿದ್ದುದನ್ನು ಕಂಡ ಅಕ್ಕಪಕ್ಕದಲ್ಲಿ ನಿಂತಿದ್ದ ಗ್ರಾಮಸ್ಥರು ತಡ ಮಾಡದೇ ಸ್ಥಳಕ್ಕೆ ಧಾವಿಸಿ ನಂತರ ಮೊಸಳೆ ಹಿಡಿದು ಹಗ್ಗದಿಂದ ಬಿಗಿದಿದ್ದಾರೆ.
ಮಗು ನುಂಗಿದೆ ಎಂದು ಮೊಸಳೆ ಕಟ್ಟಿಹಾಕಿದ್ದ ಗ್ರಾಮಸ್ಥರು
ಮಗು ಬದುಕಿದೆ ಎಂದ ಗ್ರಾಮಸ್ಥರು: ಮೊಸಳೆ ಹೊಟ್ಟೆಯಲ್ಲಿ ಮಗುವಿದೆ, ಅದು ಬದುಕಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಘಟನೆಯ ನಂತರ ಮೊಸಳೆ ನುಂಗಿದ ಮಗುವಿಗೆ ಆಮ್ಲಜನಕ ಸಿಗಲಿ ಎಂದು ಗ್ರಾಮಸ್ಥರು ಮೊಸಳೆ ಬಾಯಿಗೆ ಕಟ್ಟಿಗೆಯನ್ನೂ ಹಾಕಿದ್ದರು.
ಗಂಟೆಗಟ್ಟಲೆ ಶ್ರಮಿಸಿದ ಅರಣ್ಯ ಸಿಬ್ಬಂದಿ ಮೊಸಳೆಯನ್ನು ಗ್ರಾಮಸ್ಥರಿಂದ ಮುಕ್ತಗೊಳಿಸಿ ಚಂಬಲ್ ನದಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಇದಾದ ಬಳಿಕ ಮಂಗಳವಾರ ಬೆಳಗ್ಗೆ ಮಗುವಿನ ಶವ ನದಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಮಗುವಿನ ದೇಹದ ಮೇಲೂ ಗಾಯದ ಗುರುತುಗಳಿದ್ದು, ಸಾವು ಹೇಗೆ ನಡೆದಿದೆ ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ತಿಳಿಯಲಿದೆ.