ಬೆಂಗಳೂರು : ರಾಜ್ಯದ 1 ರಿಂದ 12 ನೇ ತರಗತಿವರೆಗಿನ ಮಕ್ಕಳಿಗೆ ಪ್ರಥಮ ಭಾಷೆಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಬೇಕು, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದ ಕಾರ್ಯಪಡೆ ರಚಿಸಿತ್ತು.
ಈ ಕಾರ್ಯಪಡೆಯು 26 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚಿಸಿ ಆ ಸಮಿತಿಗಳಿಂದ ವರದಿ ಪಡೆದಿತ್ತು. ಅದನ್ನು ಆಧರಿಸಿ ತಾನು ಸಿದ್ದಪಡಿಸಿದ ವರದಿಯನ್ನು ಇತ್ತೀಚೆಗೆ ರಾಜ್ಯಸರ್ಕಾರಕ್ಕೆ ಕಾರ್ಯಪಡೆ ಸಲ್ಲಿಸಿತ್ತು. ಇದೀಗ ಕೇಂದ್ರ ಸರ್ಕಾರಕ್ಕೆರಾಜ್ಯ ಸರ್ಕಾರ ವರದಿ ರವಾನಿಸಿದೆ ಎನ್ನಲಾಗಿದೆ.