ಮೇಘಸ್ಫೋಟದಿಂದಾಗಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು (ಸೋಮವಾರ) ಪುನರಾರಂಭವಾಗಿದೆ. ಇಂದು ಶಿವಲಿಂಗದ ದರ್ಶನಕ್ಕೆ 4ಸಾವಿರ ಭಕ್ತರಿಗೆ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದು, ಯಾತ್ರಾರ್ಥಿಗಳು ಪಹಲ್ಗಾಮ್‌ನ ನುನ್ವಾನ್ ಬೇಸ್ ಕ್ಯಾಂಪ್‌ನಿಂದ ಹೊರಟಿದೆ.
ಸೋಮವಾರ ಬೆಳಗ್ಗೆ ನಾಲ್ಕೂವರೆ ಗಂಟೆಗೆ 3,010 ಭಕ್ತರು ಪಹಲ್ಗಾಮ್‌ನಿಂದ ಮತ್ತು 1,016 ಭಕ್ತರು ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ತಮ್ಮ ಯಾತ್ರೆಯನ್ನು ಪ್ರಾರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ, ಯಾವುದೇ ಕಾರಣಕ್ಕೂ ದರ್ಶನ ಪಡೆಯದೆ ಹಿಂತಿರುಗುವ ಮಾತೇ ಇಲ್ಲೆ ಎಂದು ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ.
ಕಳೆದ ಶುಕ್ರವಾರ ಉಂಟಾದ ಪ್ರವಾಹದಿಂದಾಗಿ ಅಮರನಾಥದಲ್ಲಿ 16 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಸುಮಾರು 36 ಮಂದಿ ನಾಪತ್ತೆಯಾಗಿದ್ದು, ಹತ್ತಾರು ಭಕ್ತರು ಗಾಯಗೊಂಡಿದ್ದಾರೆ. ಇಂದೂ ಕೂಡ ನಾಪತ್ತೆಯಾದವರಿಗಾಗು ಹುಡುಕಾಟ ಮುಂದುವರೆದಿದ್ದು, ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ಪಡೆ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ.
ಇವೆಲ್ಲದರ ನಡುವೆ ಇಂದು ಪುನಃ ಯಾತ್ರಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಯಾತ್ರೆ ಸುಗಮವಾಗಿ ಸಾಗುವ ನಿರೀಕ್ಷೆ ಇದೆ ಎಂದು ಅಮರನಾಥ ಯಾತ್ರೆ ಸಮಿತಿ ತಿಳಿಸಿದೆ.