ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆ ಹಾಗು ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಅರಣ್ಯದಂಚಿನಲ್ಲಿರುವ ಹಾಗೂ ನದಿ ಪಾತ್ರದಲ್ಲಿರುವ ಕುಟುಂಬಗಳ ಪಾಲಿಗೆ ಭಾರೀ ಸಮಸ್ಯೆಯನ್ನು ತಂದೊಡ್ಡಿದೆ. ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ನದಿ ಪಾತ್ರದ ಜನರ ಸಂಕಷ್ಟಕ್ಕೆ ಕಾರಣವಾಗಿದೆ.

ಅದರಲ್ಲೂ ನದಿ ಹಾಗೂ ಹೊಳೆಗಳು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಅರಣ್ಯಂಚಿನಲ್ಲಿರುವ ಹಲವು ಗ್ರಾಮಗಳ ಸಂಪರ್ಕವನ್ನೇ ಕಳೆದುಕೊಂಡಿದೆ.
ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಸಂಪರ್ಕಿಸುವ ಎರಡು ರಸ್ತೆಗಳ ಸೇತುವೆಯು ಮುಳುಗಡೆಯಾದ ಹಿನ್ನಲೆಯಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ಹಾಗು ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು, ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲೂ ಪ್ರವಾಹದ ನೀರು ಅಡ್ಡಿಯಾಗಿದೆ. ಅರಣ್ಯದಂಚಿನಲ್ಲಿರುವ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದ 11 ಮನೆಗಳ 49 ಮಂದಿ ದಿನನಿತ್ಯದ ಪ್ರಯಾಣಕ್ಕಾಗಿ ಬಳಸುವ ಮರದಿಂದ ನಿರ್ಮಿಸಿದ ಕಾಲ್ಸೇತುವೆ ಪ್ರವಾಹ ನೀರಿಗೆ ಕೊಚ್ಚಿಹೋಗಿದೆ. ಇದರಿಂದಾಗಿ ಈ ಭಾಗದ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಕಡಿದು ಹೋಗಿದೆ. ಉಪ್ಪುಕಳ ಎಂಬಲ್ಲಿ ಕುಮಾರಧಾರ ನದಿಗೆ ಸೇರುವ ಕಿರು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಾಲ್ಸೇತುವೆ ಕೊಚ್ಚಿ ಹೋದ ಪರಿಣಾಮ ಈ ಪ್ರದೇಶದಲ್ಲಿರುವ ಸುಮಾರು 24 ಮನೆ, ಗ್ರಾಮದಲ್ಲಿ 90 ಕ್ಕೂ ಹೆಚ್ಚಿನ ಜನರಿಗೆ ಸಂಪರ್ಕಕ್ಕೆ ತೊಂದರೆಯಾಗಿದೆ.

ಕೊಚ್ಚಿ ಹೋದ ಕಾರು
ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಚೇಳ್ಯಡ್ಕ ಎಂಬಲ್ಲಿ ಕಾರೊಂದು ತುಂಬಿ ಹರಿಯುತ್ತಿರುವ ಹೊಳೆಯೊಂದಕ್ಕೆ ಜಾರಿ ಬಿದ್ದದ್ದು, ಕಾರು ಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ. ಕಾರನ್ನು ಹೊರತೆಗೆಯಲಾಗಿದ್ದು, ಕಾರಿನಲ್ಲಿದ್ದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ನೇತ್ರಾವತಿ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಸಂಗಮವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಉಪ್ಪಿನಂಗಡಿಯ ನಟ್ಟಿಬೈಲು ಮೊದಲಾದ ಕಡೆಗಳಲ್ಲಿ ನದಿ ನೀರು ಕೃಷಿ ತೋಟಗಳಿಗೆ ನುಗ್ಗಿವೆ.
ಮಳೆಯ ಸಮಸ್ಯೆಯ ನಡುವೆ ಸುಳ್ಯ ತಾಲೂಕಿನ ಸಂಪಾಜೆ, ಕಲ್ಲುಗುಂಡಿ,ಚೆಂಬು ಮೊದಲಾದ ಭಾಗದಲ್ಲಿ ಇಂದು ಕೂಡಾ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಕಳೆದ ಹದಿನೈದು ದಿನಗಳಿಂದೀಚೆಗೆ ಸುಳ್ಯ ಭಾಗದಲ್ಲಿ ಆರಕ್ಕೂ ಮಿಕ್ಕಿ ಬಾರಿ ಭೂಕಂಪನದ ಅನುಭವವಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಭೂಕಂಪನದ ಬಳಿಕ ಈ ಭಾಗದಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದು, ಹಲವು ಮನೆಗಳು ಅಪಾಯದಂಚಿನಲ್ಲಿವೆ. ಸಂಪಾಜೆ ಸರಕಾರಿ ಶಾಲೆಯ ಹಿಂಭಾಗ ಭೂ ಕುಸಿತವಾಗಿದ್ದು, ಹಾನಿಯುಂಟಾಗಿದೆ. ಇದೇ ಭಾಗದಲ್ಲಿ ಕೊಯನಾಡು ಕಿಂಡಿ ಅಣೆಕಟ್ಟು ಮರದ ದಿಮ್ಮಿಗಳಿಂದ ತಡೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಹಾನಿಯಾಗಿದೆ.

ಬಂಟ್ವಾಳ ತಾಲೂಕಿನ ಆಲಡ್ಕ, ಪಾಣೆಮಗಳೂರು ಪ್ರದೇಶದಲ್ಲಿ ನೇತ್ರಾವತಿ ನೀರು ಜನವಸತಿ ಪ್ರದೇಶಗಳಲ್ಲಿ ನುಗ್ಗಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ.

ಮಳೆ ಹಾಗು ಭೂಕುಸಿತದಿಂದಾಗಿ ಜಿಲ್ಲೆಯಲ್ಲಿ ಸಾವು-ನೋವಿನ ಜೊತೆಗೆ ಅಸ್ತಿಪಾಸ್ತಿ ನಷ್ಟವಾಗಿದ್ದು, ಮಳೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಯೂ ಇದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ಜುಲೈ 9 ತನಕ ರಜೆ ಘೋಷಿಸಲಾಗಿದ್ದು, ಮಳೆ ಇದಢ ರೀತಿ ಮುಂದುವರಿದಲ್ಲಿ, ಮತ್ತೆ ರಜೆ ನೀಡುವ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.