ಸಮಗ್ರ ನ್ಯೂಸ್: ಕಳೆದೊಂದು ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು ಈ ಕಾರಣ ಹವಾಮಾನ ಇಲಾಖೆ ಜು.12ರವರೆಗೆ ರೆಡ್ ಅಲರ್ಟ್ ಮುಂದುವರಿಸಿದೆ.
ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಮುಂದುವರಿದಿದ್ದು, ಇನ್ನೂ ಕೆಲ ದಿನಗಳ ಕಾಲ ಸತತವಾಗಿ ಮಳೆಯಾಗಲಿರುವ ಕಾರಣದಿಂದ ರೆಡ್ ಅಲರ್ಟ್ ಮುಂದುವರಿಸಿದ್ದಾರೆ.

ಕಳೆದ ಒಂದು ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಹಲವು ಮನೆಗಳು, ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಕಡಲ್ಕೊರೆತ ಕೂಡ ತೀವ್ರವಾಗಿದ್ದು, ಸಮುದ್ರ ತೀರದ ಜನತೆಯಲ್ಲಿ ಭೀತಿಯನ್ನುಂಟು ಮಾಡಿದೆ.
ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಶನಿವಾರವೂ ಅಪಾರ ಹಾನಿಯಾಗಿದೆ. ಜಿಲ್ಲೆಯಲ್ಲಿ ಶನಿವಾರ ಒಂದು ಮನೆ ಸಂಪೂರ್ಣ ನೆಲಸಮವಾಗಿದೆ. ಅಲ್ಲದೆ 9 ಮನೆಗಳಿಗೆ ಭಾಗಶಃ ಹಾನಿಯಾ ಗಿವೆ. ಒಟ್ಟಾರೆ ಈವರೆಗೆ ೫೬ ಮನೆಗಳು ಸಂಪೂರ್ಣ ಮತ್ತು ೪೨೭ ಮನೆಗಳಿಗೆ ಭಾಗಶಃ ಹಾನಿಯಾಗಿವೆ.

ಮಂಗಳೂರು ತಾಲೂಕಿನಲ್ಲಿ ೧೭, ಬಂಟ್ವಾಳದಲ್ಲಿ ೧೦, ಪುತ್ತೂರಿನಲ್ಲಿ ೧, ಬೆಳ್ತಂಗಡಿಯಲ್ಲಿ ೪, ಸುಳ್ಯದಲ್ಲಿ ೨, ಮೂಡುಬಿದಿರೆಯಲ್ಲಿ ೪, ಕಡಬದಲ್ಲಿ ೨, ಮುಲ್ಕಿಯಲ್ಲಿ ೭, ಉಳ್ಳಾಲದಲ್ಲಿ ೯ ಸಹಿತ ೫೬ ಮನೆಗಳು ಸಂಪೂರ್ಣ ನೆಲಸಮವಾಗಿದೆ. ಅಲ್ಲದೆ ಮಂಗಳೂರು ತಾಲೂಕಿನಲ್ಲಿ ೮೬, ಬಂಟ್ವಾಳದಲ್ಲಿ ೨೭, ಪುತ್ತೂರಿನಲ್ಲಿ ೨೧, ಬೆಳ್ತಂಗಡಿಯಲ್ಲಿ ೫೫, ಸುಳ್ಯದಲ್ಲಿ ೫೦ ಮೂಡುಬಿದಿರೆ ೨೯, ಕಡಬದಲ್ಲಿ ೫೮, ಮುಲ್ಕಿಯಲ್ಲಿ ೨೨, ಉಳ್ಳಾಲದಲ್ಲಿ ೯೯ ಸಹಿತ ೪೨೭ ಮನೆಗಳಿಗೆ ಭಾಗಶಃ ಹಾನಿಯಾಗಿವೆ ಎಂದು ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಜನ ಜೀವನ ಅಸ್ತವ್ಯಸ್ಥಗೊಂಡಿದ್ದಾರೆ. ಕಡಲ ತೀರದ ಪ್ರದೇಶದ ಜನರು ಆತಂಕದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಡಲ್ಕೊರೆತದಿಂದ ತೀರ ಪ್ರದೇಶದ ಮನೆ, ರಸ್ತೆಗಳು, ಮರಗಳನ್ನು ಸಮುದ್ರದ ಭಾರೀ ಗಾತ್ರದ ಅಲೆಗಳು ಆಹುತಿ ಪಡೆಯುತ್ತಿದೆ.
ಶನಿವಾರ ದಿನವಿಡೀ ಎಡೆಬಿಡದೆ ಮಳೆ ಸುರಿದಿದೆ. ಹವಾಮಾನ ಇಲಾಖೆಯು ಜು.12ರವರೆಗೆ ರೆಡ್ ಅಲರ್ಟ್ ಮತ್ತು ಜು.14ರವರೆಗೆ ಆರೇಂಜ್ ಅಲರ್ಟ್ ಘೋಷಿಸಿದೆ.