ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಳೆಯಬ್ವರ ತೀವ್ರಗೊಂಡಿದ್ದು, ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜು.8 ಮತ್ತು 9ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ.8 ಮತ್ತು 9ರಂದು ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಇದ್ದರೆ, ಜು.9ರಿಂದ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಕಲಬುರಗಿ ಮತ್ತು ಬೀದರ್ನಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಗುರುವಾರ ಉತ್ತರ ಕನ್ನಡದ ಕ್ಯಾಸಲ್ ರಾಕ್ನಲ್ಲಿ ಬರೋಬ್ಬರಿ 25 ಸೆಂಮೀ. ದಾಖಲೆ ಮಳೆ ಬಿದ್ದಿದೆ. ಬಹುತೇಕ ಜಿಲ್ಲೆಗಳಲ್ಲಿ ನಿರಂತರ ಜಡಿಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಲೆನಾಡ ವಾತಾವರಣ ಸೃಷ್ಟಿಯಾಗಿದೆ.
ರಾಜ್ಯದ ಬಹುತೇಕ ಸ್ಥಳಗಳಲ್ಲಿ ಗುರುವಾರ ಮಳೆಯಾಗಿದೆ. ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ಬೆಳಿಗ್ಗೆ 8.30ರ ವೇಳೆಗೆ ಹಿಂದಿನ 24 ಗಂಟೆಯ ಅವಧಿಯಲ್ಲಿ ಉಡುಪಿಯ ಕೊಲ್ಲೂರಿನಲ್ಲಿ ಗರಿಷ್ಠ ಮಳೆಯಾಗಿದೆ. ಅಲ್ಲಿ 21 ಸೆಂ.ಮೀ. ಮಳೆ ಸುರಿದಿದೆ.
ಸಿದ್ದಾಪುರ (ಉಡುಪಿ) 18, ತುಮರಿ 17, ಲಿಂಗನಮಕ್ಕಿ (ಶಿವಮೊಗ್ಗ) 16, ಕೊಪ್ಪ (ಚಿಕ್ಕಮಗಳೂರು) 15, ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) 14, ಅಗ್ರಹಾರ ಕೋಣಂದೂರು (ಶಿವಮೊಗ್ಗ), ಶೃಂಗೇರಿಯಲ್ಲಿ (ಚಿಕ್ಕಮಗಳೂರು) ತಲಾ 13, ಯಲ್ಲಾಪುರ, ಶಿರಾಲಿ, ಕುಮಟಾ, ಮಂಕಿ, ಹೊನ್ನಾವರ (ಉತ್ತರ ಕನ್ನಡ) ಹಾಗೂ ಭಾಗಮಂಡಲದಲ್ಲಿ (ಕೊಡಗು) ತಲಾ 12 ಸೆಂ.ಮೀ. ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಮುಂದಿನ 48 ಗಂಟೆಗಳು ಈ ವೇಗವು 40ರಿಂದ 50 ಕಿ.ಮೀ ಇರಲಿದೆ. ಗರಿಷ್ಠ 65 ಕಿ.ಮೀ ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.