ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಶೆಟ್ಟಿಯ ಅಂಗಿ ಬಿಚ್ಚಿ ಅವನು ಹಾಕಿಸಿಕೊಂಡಿದ್ದ ಟ್ಯಾಟು ನೋಡಿ ಮಂಗಳೂರು ಪೊಲೀಸ್ ಕಮಿಷನರ್ ಬುದ್ದಿವಾದ ಹೇಳಿದ್ದಾರೆ.
ಸ್ಯಾಂಡಲ್ಲ್ವುಡ್ ಡ್ರಗ್ ಪ್ರಕರಣದಲ್ಲಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧಿತನಾಗಿದ್ದ. ಇಂದು ಮಂಗಳೂರಿನಲ್ಲಿ ನಡೆದ ಎಂಒಬಿ ಪರೇಡ್ನಲ್ಲಿ ಇದ್ದ ಅವನನ್ನು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್
ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಶರ್ಟ್ ಬಿಚ್ಚಿಸಿ ಆತನ ಕತ್ತಿನಲ್ಲಿದ್ದ ಹಾರ ಮತ್ತು ಎದೆಯ ಮೇಲಿದ್ದ ಟ್ಯಾಟೂ ನೊಡಿ ‘ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಿಶೋರ್ ಶೆಟ್ಟಿ, ತಾಯಿಯ ಟ್ಯಾಟೂ ಹಾಕಿರುವೆ ಎಂದಾಗ ‘ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ. ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ. ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದಿ. ಹೇಗೆ ತೆಗೆದುಕೊಳ್ಳುತ್ತಿದ್ದೆ’ ಎಂದು ಪ್ರಶ್ನಿಸಿದ್ದಾರೆ.
ಕಿಶೋರ್ ಶೆಟ್ಟಿ ಉದ್ದ ಕೂದಲು ಬಿಟ್ಟಿದ್ದನ್ನು ಪ್ರಶ್ನಿಸಿದ ಕಮಿಷನರ್ಗೆ, ಡ್ಯಾನ್ಸ್ ಗಾಗಿ ಈ ರೀತಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಇದೀಗ ಕಿಶೋರ್ ಅಮನ್ ಶೆಟ್ಟಿ ಮಂಗಳೂರಿನ ಖಾಸಗಿ ಟಿವಿ ವಾಹಿನಿಯೊಂದರ ಡ್ಯಾನ್ಸ್ ಸ್ಪರ್ಧೆಯ ಜಡ್ಜ್ ಕೂಡಾ ಆಗಿದ್ದಾನೆ.