Ad Widget .

ಹೆಣ್ಣು, ಹೊನ್ನು , ಮಣ್ಣು, ಸರಳವಾಸ್ತು ಗುರೂಜಿಯ ಹೆಣ ಬಿದ್ದಿದ್ಯಾಕೆ? ಇಲ್ಲಿದೆ ಮೂರು ಕಾರಣ

ಸಮಗ್ರ ನ್ಯೂಸ್: ಸರಳ ವಾಸ್ತು ಹೆಸರಿನಲ್ಲಿ ಖ್ಯಾತಿ ಪಡೆದಿದ್ದ ಚಂದ್ರಶೇಖರ್ ಗುರೂಜಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಹೊಟೇಲ್​​ನಲ್ಲಿ ವಾಸ್ತವ್ಯ ಹೂಡಿದ್ದ ಗುರೂಜಿಯನ್ನು ಭೇಟಿ ಆಗಲು ಬಂದು ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ.

Ad Widget . Ad Widget .

ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುತ್ತಿದೆ. ಜುಲೈ 2ರಿಂದಲೂ ಹೊಟೇಲ್​ನಲ್ಲಿ ವಾಸ್ತವ್ಯ ಹೂಡಿದ್ದ ಗುರೂಜಿಯನ್ನು ಭೇಟಿಯಾಗಲು ಬಂದಿದ್ದ ಇಬ್ಬರು ಆಗಂತುಕರಲ್ಲಿ ಓರ್ವ ಕಾಲಿಗೆ ನಮಸ್ಕಾರ ಮಾಡುವಂತೆ ಮಾಡಿದ್ದಾನೆ. ಆ ವೇಳೆ ಮತ್ತೋರ್ವ ಎದೆಗೆ ಚಾಕು ಇರಿದಿದ್ದಾನೆ. ಕೂಡಲೇ ಕೆಳಕ್ಕೆ ಬಿದ್ದು ಗುರೂಜಿ ಮೇಲೆ ಎರಗಿದ ಇಬ್ಬರು ಹಂತಕರು, ಒಂದೆರಡು ನಿಮಿಷದಲ್ಲಿ ನೂರಾರು ಬಾರಿ ಇರಿದು ಅಲ್ಲಿಂದ ಎಸ್ಕೇಪ್​ ಆಗಿದ್ದರು. ಕೂಡಲೇ ಮಾಹಿತಿ ಪಡೆದ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬೆನ್ನತ್ತಿ ಬೆಳಗಾವಿಯ ರಾಮದುರ್ಗ ಬಳಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೊಲೆ ಹಿಂದಿನ ಕಾರಣಗಳು ಮಾತ್ರ ಕಣ್ಣಾಮುಚ್ಚಾಲೆ ಆಡುತ್ತಿವೆ.

Ad Widget . Ad Widget .

ಮಾಜಿ ಉದ್ಯೋಗಿ, ಉದ್ಯೋಗಿಯ ಪತಿ ಹಾಗು ಸ್ನೇಹಿತನಿಂದ ಕೃತ್ಯ..!
ಚಂದ್ರಶೇಖರ ಗುರೂಜಿ ವಾಸ್ತು ಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದರು. ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು 2014 ರಲ್ಲಿ ಕೆಲಸ ಬಿಟ್ಟಿದ್ದ ಮಹಾಂತೇಶ್​ಗೆ 2019ರಲ್ಲಿ ಗುರೂಜಿ ಜೊತೆಯಲ್ಲೇ ಕೆಲಸ ಮಾಡುವ ವನಜಾಕ್ಷಿ ಎಂಬಾಕೆಯ ಜೊತೆಗೆ ವಿವಾಹ ಮಾಡಲಾಗಿತ್ತು. ಸ್ವತಃ ಚಂದ್ರಶೇಖರ್​ ಗುರೂಜಿಯೇ ಮುಂದೆ ನಿಂತು ಮದುವೆ ನೆರವೇರಿಸಿದ್ದರು. ಇನ್ನು ಮತ್ತೋರ್ವ ಆರೋಪಿ ಮಂಜುನಾಥ್​ ದುಮ್ಮವಾಡ ಕೂಡ ಗುರೂಜಿ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿಯೂ ಹೊರ ಬಿದ್ದಿದೆ. ಮತ್ತೊಂದು ಕಡೆ ವಿದ್ಯಾನಗರ ಪೊಲೀಸರು ಆರೋಪಿ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಾಪಸ್​ ಬಿಟ್ಟು ಕಳುಹಿಸಿದ್ದಾರೆ. ಕೊಲೆಗೆ ಮೂರು ಕಾರಣ ಇರಬಹುದು ಎನ್ನುವುದು ಪೊಲೀಸ್​ ಮೂಲಗಳ ಶಂಕೆ.

ಅಕ್ರಮ ಆಸ್ತಿ ಸಂಪಾದನೆ ಮಾಡಿದ್ರಾ ಗುರೂಜಿ..?
ವಾಸ್ತು ವಿಚಾರದಲ್ಲಿ ಸಾಕಷ್ಟು ಕಡೆಗಳಲ್ಲಿ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದ ಚಂದ್ರಶೇಖರ ಗುರೂಜಿ, ಟಿವಿಗಳಲ್ಲಿ ಜಾಹೀರಾತು ನೀಡುವ ಉದ್ದೇಶದಿಂದಲೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರು. ಸರಳ ವಾಸ್ತು ಅನ್ನೋ ಹೆಸರಿನಲ್ಲಿ ಸಾಕಷ್ಟು ಕಡೆ ವಂಚನೆ ಸೇರಿದಂತೆ ಹತ್ತಾರು ಕೇಸ್​ಗಳು ದಾಖಲಾದ ಬಳಿಕ ಮಾನವ ಗುರೂಜಿ ಎಂದು ಮರು ನಾಮಕರಣ ಮಾಡಿಕೊಂಡಿದ್ದ ಗುರೂಜಿ ನೂರಾರು ಕೋಟಿ ರೂಪಾಯಿ ಆಸ್ತಿ ಸಂಪಾದನೆ ಮಾಡಿದ್ದರು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಈ ಎಲ್ಲಾ ಆಸ್ತಿಯನ್ನು ಗುರೂಜಿ ಸ್ವಂತ ಹೆಸರಿನಲ್ಲಿ ಮಾಡಿಕೊಂಡರೆ ಅನುಮಾನ ಹೆಚ್ಚಾಗುತ್ತದೆ, ತೆರಿಗೆ ಕಟ್ಟುವ ಸಮಸ್ಯೆ ಎದುರಾಗುತ್ತದೆ ಎನ್ನುವ ಕಾರಣಕ್ಕೆ ಆಪ್ತರ ಹೆಸರಲ್ಲೂ ಆಸ್ತಿ ಮಾಡಿದ್ದರು. ಅದೇ ಆಸ್ತಿಯನ್ನು ವಾಪಸ್​ ಕೇಳಿದಾಗ ಈ ರೀತಿ ಕೊಲೆ ಮಾಡುವ ನಿರ್ಧಾರಕ್ಕೆ ಆರೋಪಿಗಳು ಬಂದಿರಬಹುದು ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಇನ್ನೊಂದು ಮೂಲಗಳಿಂದ ಕೊಲೆಗೆ ಹೆಣ್ಣು ಕಾರಣ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಮದುವೆ ಮಾಡಿಸಿದ್ದೇ ಗುರೂಜಿಗೆ ಮುಳುವಾಯ್ತಾ..?
ಚಂದ್ರಶೇಖರ ಗುರೂಜಿ ಆಪ್ತರೇ ಹೇಳುವ ಪ್ರಕಾರ ಮಹಾಂತೇಶ್​​ 2014ರಲ್ಲೇ ಕೆಲಸ ಬಿಟ್ಟು ಗುರೂಜಿಯಿಂದ ದೂರವಾಗಿದ್ದ. ಆದರೂ ಆತನನ್ನು ಬಿಡದ ಗುರೂಜಿ 2019ರಲ್ಲಿ ತನ್ನ ಸಂಸ್ಥೆಯಲ್ಲೇ ಕೆಲಸ ಮಾಡ್ತಿದ್ದ ವನಜಾಕ್ಷಿ ಎಂಬುವರನ್ನು ಮದುವೆ ಮಾಡಿದ್ದರು. ಈ ಮೂಲಕ ಮಹಾಂತೇಶ್​ ಕೂಡ ತನ್ನ ವ್ಯಾಪ್ತಿಯನ್ನು ಬಿಟ್ಟು ತೆರಳದಂತೆ ಸ್ವಾಮೀಜಿ ತಂತ್ರಗಾರಿಕೆ ಮಾಡಿದ್ದರು ಎನ್ನುವುದು ತಿಳಿದು ಬಂದಿದೆ. ಇನ್ನೊಂದು ಮಾಹಿತಿಯಂತೆ ಆಗಂತುಕರು ಕೊಲೆ ಮಾಡಿರುವ ರೋಷವೇಷ ನೋಡಿದಾಗ ಕೇವಲ ಹಣಕ್ಕಾಗಿ ನಡೆದಿರುವ ಹತ್ಯೆಯಲ್ಲ. ಓರ್ವ ವ್ಯಕ್ತಿಯನ್ನು ಸಾಮಾನ್ಯವಾಗಿ ಸಾಯಿಸುವುದಾದರೆ ಸುಮ್ಮನೆ ಚಾಕು ಇರಿದು ಹೋಗುತ್ತಿದ್ದರು. ಅಷ್ಟೊಂದು ಭೀಕರವಾಗಿ ಕುತ್ತಿಗೆಯನ್ನು ಕೊಯ್ದು ರೌದ್ರಾರೂಪ ಪ್ರದರ್ಶನ ಮಾಡುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೆಣ್ಣನ್ನು ಚಂದ್ರಶೇಖರ್​ ಗುರೂಜಿ ಬಳಸಿಕೊಂಡು ಸಾವಿಗೆ ಆಹ್ವಾನ ನೀಡಿದರಾ ಅಥವಾ ಕೋಟಿ ಕೋಟಿ ಹಣ ಮಾಡಿಟ್ಟು, ತನ್ನ ಸಾವನ್ನು ತಾನೇ ಆಹ್ವಾನಿಸಿದರಾ ಎಂಬುದು ಪೊಲೀಸರ ತನಿಖೆಯಲ್ಲಿ ಹೊರ ಬೀಳಬೇಕಿದೆ.

ಎಫ್ ಐಆರ್ ನಲ್ಲಿ ಏನಿದೆ?
‘ಸರಳ ವಾಸ್ತು ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ್ದ ಕಾರಣಕ್ಕೆ ಮಹಾಂತೇಶ ಅವರನ್ನು ಚಂದ್ರಶೇಖರ ಗುರೂಜಿ ಕೆಲಸದಿಂದ ತೆಗೆದಿದ್ದರು. ಆ ಸಿಟ್ಟಿನಿಂದ ಹುಬ್ಬಳ್ಳಿ ಗೋಕುಲ ರಸ್ತೆ, ಜೆಸಿ ನಗರದಲ್ಲಿ ಗುರೂಜಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಜಾಗ ಕೊಟ್ಟಿರಲಿಲ್ಲ ಹಾಗೂ ಸೋಲಾರ್ ವ್ಯವಸ್ಥೆ ಅಳವಡಿಕೆ ಮಾಡಿಲ್ಲ ಎಂದು ಮಹಾಂತೇಶ ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಹಿಂಪಡೆಯಲು ಗುರೂಜಿ ಅವರಲ್ಲಿ ಹಣ ಕೇಳುತ್ತಿದ್ದರು. ಆಗಾಗ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಹಣ ನೀಡದ ಹಿನ್ನೆಲೆಯಲ್ಲಿ ಹಾಗೂ ಕೆಲಸದಿಂದ ತೆಗೆದು ಹಾಕಿದ್ದರಿಂದ ಹತ್ಯೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆ ಬೇನಾಮಿ ಆಸ್ತಿ, ಹಣದಾಹ ಹೆಣ್ಣಿನ ಕೈಚಳಕ ಈ ಕೊಲೆಯ ಹಿಂದೆ ಇರುವ ಸಾಧ್ಯತೆ ಇದ್ದು, ಪೊಲೀಸರ ತನಿಖೆಯಿಂದಷ್ಟೇ ಬೆಳಕಿದೆ ಬರಬೇಕಿದೆ.

Leave a Comment

Your email address will not be published. Required fields are marked *