ಸಮಗ್ರ ನ್ಯೂಸ್: ಮಧ್ಯರಾತ್ರಿಯಲ್ಲಿ ಭೂಕಂಪವಾದ ನಂತರ ಇದೀಗ ಮತ್ತೆ ಸುಳ್ಯದಲ್ಲಿ ಭೂಮಿ ಕಂಪಿಸಿದೆ.
ತಾಲೂಕಿನ ಉಬರಡ್ಕ, ಚೆಂಬು, ಗೂನಡ್ಕದಲ್ಲಿ 10.45ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು ಜನತೆ ಆತಂಕ ದಿಂದ ಹೊರಗೋಡಿ ಬಂದಿದ್ದಾರೆ.
ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂ ಕಂಪನ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ.
ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ. ಜು.1 ರಂದು ಹಗಲು 10 ಗಂಟೆ 47 ನಿಮಿಷ 26 ಸೆಕೆಂಡ್‌ಗೆ ಈ ಭೂಕಂಪನ ದಾಖಲಾಗಿದೆ.5.1 ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಕಿ.ಮಿ.ಆಳದಲ್ಲಿ ಭೂಕಂಪನ ಸಂಭವಿಸಿದ್ದು, ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 11.3 ಕಿ.ಮಿ.ವ್ಯಾಪ್ತಿಯಲ್ಲಿ ಕೊಡಗು ಸಂಪಾಜೆಯ ವಿವಿಧ ಭಾಗಗಳಲ್ಲಿ 11.6 ಕಿ.ಮಿ. ವ್ಯಾಪ್ತಿಯಲ್ಲಿ, ಕರಿಕೆ ಭಾಗದಲ್ಲಿ 9.1 ಕಿ.ಮಿ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ ಎಂದು ವರದಿ ತಿಳಿಸಿದೆ. ವಾರದೊಳಗೆ 5ನೇ ಬಾರಿ ಭೂ ಕಂಪನ ಉಂಟಾಗಿದೆ. ಇಂದು ಬೆಳಗ್ಗಿನ ಜಾವ 1.15ಕ್ಕೆ 1.8 ತೀವ್ರತೆಯ ಕಂಪನ ಉಂಟಾಗಿತ್ತು. ಹಗಲಿನ ಕಂಪನ ರಾತ್ರಿಗಿಂತ ತೀವ್ರತೆ ಹೆಚ್ಚಿತ್ತು. ಜೂ28 ರಂದು ಎರಡು ಬಾರಿ ಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 3.0 ಮತ್ತು 1.8 ದಾಖಲಿಸಿತ್ತು. ಜೂ.25 ರಂದು ಸಂಭವಿಸಿದ ಭೂಕಂಪನ ಕರಿಕೆ ಸಮೀಪದಲ್ಲಿ ಸಂಭವಿಸಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 2.3 ದಾಖಲಾಗಿತ್ತು.