ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿ ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ವೇಗ ಪಡೆದುಕೊಂಡಿದೆ. ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.30 ಮತ್ತು ಜುಲೈ 1ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಬುಧವಾರ ಬೆಳಗ್ಗಿನಿಂದಲೇ ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಮಳೆ ಸುರಿಯತೊಡಗಿತ್ತು. ದಿನವಿಡೀ ಮೋಡ ಹಾಗೂ ಮಳೆಯಾಗಿದ್ದು, ಜನತೆಯನ್ನು ಚಳಿ ಹಿಡಿಸಿದೆ. ಎಡೆಬಿಡದೆ ಸುರಿದ ಮಳೆಗೆ ಮಂಗಳೂರು ನಗರದ ತಗ್ಗು ಪ್ರದೇಶದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ನಾಗುರಿಯ ಕಪಿತಾನಿಯಾ ಬಳಿ ಮಂಗಳವಾರ ರಾತ್ರಿ ರಸ್ತೆ ಬದಿ ಸರಕು ಕಂಟೈನ್ ಲಾರಿ ಕೆಸರಿಗೆ ಸಿಲುಕಿದ್ದು ಬುಧವಾರ ಮಧ್ಯಾಹ್ನ ವೇಳೆಗೆ ಅದನ್ನು ಕ್ರೇನ್ ಮೂಲಕ ತೆರವುಗೊಳಿಸಲಾಯಿತು.
ದ.ಕ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 42.3 ಮಿಲಿ ಮೀಟರ್ ಆಗಿದೆ. ಜಿಲ್ಲೆಯ ಬೆಳ್ತಂಗಡಿ 36.6 ಮಿ.ಮೀ, ಬಂಟ್ವಾಳ 68.7 ಮಿ.ಮೀ, ಮಂಗಳೂರು 28.5 ಮಿ.ಮೀ, ಪುತ್ತೂರು39.7 ಮಿ.ಮೀ, ಸುಳ್ಯ 32.5 ಮಿ.ಮೀ, ಮೂಡುಬಿದಿರೆ 56.5 ಮಿ.ಮೀ, ಹಾಗೂ ಕಡಬದಲ್ಲಿ 43.4 ಮಿ.ಮೀ. ಮಳೆ ದಾಖಲಾಗಿದೆ.