ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಬಿರುಸುಗೊಂಡಿದೆ. ಮಂಗಳೂರು ನಗರ ಹಾಗೂ ಹೊರವಲಯದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರೆ, ಕೆಲವೆಡೆ ಮನೆ ಸಮೀಪ ದರೆ ಕುಸಿತ, ತಡೆಗೋಡೆ ಕುಸಿದಿರುವುದು ವರದಿಯಾಗಿದೆ.
ಮರವೂರು ಸೇತುವೆ ಬಳು ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಗರದ ಪ್ರಮುಖ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಮಳೆ ಇದೇರೀತಿ ಇನ್ನೂ ಕೆಲ ಗಂಟೆಗಳ ಕಾಲ ಮುಂದುವರಿದಲ್ಲಿ ರಾಜಕಾಲುವೆಗಳ ಸುತ್ತಮುತ್ತ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ.
ಕೊಟ್ಟಾರ ಚೌಕಿ ರಸ್ತೆಗೆ ರಾಜಕಾಲುವೆ ತುಂಬಿ ಹರಿದಿದ್ದು, ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸವಾರರು ಸಂಚಾರ ನಡೆಸಲು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆಗಳಲ್ಲಿ ಮನೆಗಳಿಗೂ ನೀರು ನುಗ್ಗಿದೆ.
ನಗರ ಹೊರವಲಯದ ನೀರುಮಾರ್ಗ ಸಮೀಪದ ಬದಿಬಡಿ ಕ್ಷೇತ್ರವು ಭಾರೀ ಬೆಳಗ್ಗೆಯಿಂದಲೇ ಜಲಾವೃತಗೊಂಡಿದೆ.
ಭಾರೀ ಮಳೆಯಿಂದ ಕೊಣಾಜೆ ಸಮೀಪದ ಅಸೈ ಮದಕ ಎಂಬಲ್ಲಿ ದರೆ ಕುಸಿದು ಮನೆಗೂ ಹಾನಿ ಸಂಭವಿಸುವ ಭೀತಿ ಎದುರಾಗಿದೆ. ಮನೆಮಂದಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಮಲಾರ್ ಇಸ್ಲಾಹಿ ನಗರದ ಮಸೀದಿಯ ತಡೆಗೋಡೆ ಭಾಗಶಃ ಕುಸಿದಿದೆ.
ಈ ನಡುವೆ ಮಂಗಳೂರಿನ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು(ಜೂ.30) ಶಾಲೆಗಳಿವೆ ರಜೆ ಘೋಷಿಸಿವೆ. ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಇಂದು (ಜೂ.30) ರಜೆ ಸಾರಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಇದೇರೀತಿ ಮಳೆ ಮುಂದುವರಿದರೆ, ಶುಕ್ರವಾರ ಬೆಳಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗಳಿಗೆ ರಜೆ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.