ಸಮಗ್ರ ನ್ಯೂಸ್: ಎರಡು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಮುಂಜಾನೆ 7.46 ರ ಸುಮಾರಿಗೆ ಕಂಪನವಾಗಿದ್ದು ಜನ ಭಯಬೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ. ತಾಲೂಕಿನ ಸುಳ್ಯ ಪಟ್ಟಣ, ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಜಾಲ್ಸುರು, ಆಲೆಟ್ಟಿ, ಐವರ್ನಾಡು, ಅಮರಮುಡ್ನೂರು, ಸಂಪಾಜೆ ,ಗುತ್ತಿಗಾರು ಸೇರಿದಂತೆ ಬಹುತೇಕ ಕಡೆ ಭೂಮಿ ಕಂಪಿಸಿದೆ.
10-15 ಸೆಕೆಂಡುಗಳ ಕಾಲ ಈ ವಿದ್ಯಮಾನ ನಡೆದಿದ್ದು, ಜನರು ಭಯಗೊಂಡಿದ್ದಾರೆ. ಕಡಬ ತಾಲೂಕಿನ ಸುಬ್ರಹ್ಮಣ್ಯ, ಐನೆಕಿದು, ಕೊಡಗು ಜಿಲ್ಲೆಯ ಕರಿಕೆ, ಭಾಗಮಂಡಲ, ಸಂಪಾಜೆ, ಕಾಸರಗೋಡು ಗಡಿಭಾಗ ಪಾಣತ್ತೂರು, ಕಲ್ಲಪ್ಪಳ್ಳಿ ಭಾಗಗಳಲ್ಲೂ ಭೂಕಂಪನ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಸುಳ್ಯದ ಕುರುಂಜಿಗುಡ್ಡೆ, ಜಾಲ್ಸೂರು ಗ್ರಾಮದ ಸೋಣಂಗೇರಿ ಭಾಗಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಬಗ್ಗೆ ಓದುಗರು ಮಾಹಿತಿ ನೀಡಿದ್ದಾರೆ.