ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳ ಹಿಂದೆ 100 ರ ಗಡಿ ದಾಟಿದ್ದ ಟೊಮೆಟೋ ಬೆಲೆ ದಿಢೀರ್ ಕುಸಿದಿದ್ದು ಸಗಟು ವ್ಯಾಪಾರದಲ್ಲಿ ಶನಿವಾರ ಪ್ರತಿ ಕೆ.ಜಿಗೆ 26ಕ್ಕೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಟೊಮೆಟೋ ಬೆಳೆ ನೆಲಕಚ್ಚಿದ ಪರಿಣಾಮ ಬೆಲೆಯೂ ಗಗನಕ್ಕೇರಿತ್ತು.
ಇದೀಗ ಮಳೆ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ, ಬೆಂಗಳೂರು ಸುತ್ತ ಮುತ್ತ ಉತ್ತಮ ಫಸಲು ಬಂದಿರುವುದು ಹಾಗೂ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಟೊಮೆಟೋ ಪ್ರಮಾಣವೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆಯಾಗಿದೆ. ಇದರಿಂದ ಗ್ರಾಹಕರು ಖುಷಿಯಾಗಿದ್ದರೆ, ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದಾರೆ.
ಬೆಲೆ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೆಟೋ ಆಗಮಿಸುತ್ತಿತ್ತು. ಪ್ರಸ್ತುತ ಬೆಲೆ ಕುಸಿದಿದ್ದರೂ ನಾಸಿಕ್‌ನಿಂದ ಬರುವ ಪ್ರಮಾಣ ನಿಂತಿಲ್ಲ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಟೊಮೆಟೋ ಉತ್ತಮವಾದ ಫಸಲು ಬಂದಿರುವುದು ಬೆಲೆ ಕುಸಿಯಲು ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.