ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಹೊಸ ಟ್ವಿಸ್ಟ್ ಒಂದು ಹೊರಬಿದ್ದಿದೆ. ಮೂಲಗಳ ಪ್ರಕಾರ ಬಂಡಾಯ ಶಾಸಕರ ಮನವೊಲಿಸಲು ಶಿವಸೇನೆ ಶತಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಶಿವಸೇನೆಯ ಹಿರಿಯ ನಾಯಕರ ನಂತರ ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ಶಾಸಕರ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಶಾಸಕರನ್ನು ವಾಪಸ್ ಪಕ್ಷಕ್ಕೆ ಕರೆತರಲು ವಿಶೇಷ ಯೋಜನೆ ರೂಪಿಸಿದ್ದಾರೆ. ಮಾಹಿತಿ ಪ್ರಕಾರ, ಸಿಎಂ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಬಂಡಾಯ ಶಾಸಕರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ನಿರಂತರವಾಗಿ ಶಾಸಕರ ಪತ್ನಿಯರನ್ನು ಸಂಪರ್ಕಿಸುತ್ತಿದ್ದಾರಂತೆ. ಬಂಡಾಯ ಶಾಸಕರ ಪತ್ನಿಯರ ಮೂಲಕ ತಮ್ಮ ಮಾತುಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಶ್ಮಿ ಠಾಕ್ರೆ ಅವರು ಬಂಡಾಯ ಶಾಸಕರ ಪತ್ನಿಯರನ್ನು ಸಂಪರ್ಕಿಸಿದ್ದು, ತಮ್ಮ ಸಂದೇಶಗಳನ್ನು ಅವರ ಮೂಲಕವೇ ತಿಳಿಸುತ್ತಿದ್ದಾರೆ. ಆದರೆ, ಬಂಡಾಯ ಶಾಸಕರ ಪತ್ನಿಯರು ಸಹ ರಶ್ನಿ ಠಾಕ್ರೆ ಅವರ ಮಾತಿಗೆ ಬೆಲೆ ನೀಡದೆ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಇನ್ನು ಕಳೆದ ಶುಕ್ರವಾರದಂದು ಶಿವಸೇನೆ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರು ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ತೆರಳಿದ್ದರು. ಆ ಬಳಿಕ ಏಕನಾಥ್ ಶಿಂಧೆ ಮುಂಬೈಗೆ ಆಗಮಿಸಿ ಉಪ ಸಭಾಪತಿಯನ್ನು ಭೇಟಿಯಾಗುತ್ತಾರೆ ಎಂಬ ಮಾಹಿತಿಗಳೂ ಲಭಿಸಿದ್ದವು. ಶಿಂಧೆ ಜೊತೆ 40 ಮಂದಿ ಶಾಸಕರಿದ್ದು, ಆ ಪೈಕಿ 34 ಮಂದಿ ಶಿವಸೇನೆ ಮತ್ತು 6 ಮಂದಿ ಪಕ್ಷೇತರರು ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಶಾಸಕರ ಪತ್ನಿಯರನ್ನು ಠಾಕ್ರೆ ಪತ್ನಿ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.