ಸಮಗ್ರ ನ್ಯೂಸ್: ಸರ್ಕಾರಿ ಶಾಲಾ ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆಡಳಿತಾತ್ಮಕ ಆದೇಶವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದ್ದಾರೆ.
ಕನ್ನಡ ಶಾಲೆಗಳ ಸ್ಥಿತಿ ದುಸ್ಥಿತಿಗೆ ತಲುಪಿವೆ. ಇದೇ ರೀತಿ ಮುಂದುವರಿದರೆ 10 ವರ್ಷದಲ್ಲಿ ಕನ್ನಡ ಉಳಿಯುವುದಿಲ್ಲ. ಕನ್ನಡ ಸಂಘಟನೆಗಳು, ಕಸಾಪ ಯಾವುದೂ ಇರುವುದಿಲ್ಲ. ಕನ್ನಡ ಮಾಧ್ಯಮ ಕಡ್ಡಾಯ ವಿಚಾರವಾಗಿ ಸಾಹಿತಿ ಎಸ್. ಎಲ್. ಭೈರಪ್ಪ ನೇತೃತ್ವದ ಸಮಿತಿ ರಚಿಸಲಾಗಿದೆ. ಶಿಕ್ಷಕರು ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದಾರೆ. ಆದರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸದಿದ್ದರೆ ಹೇಗೆ? ಅವರಿಗೆ ನೈತಿಕವಾದ ಜವಾಬ್ದಾರಿ ಇರಬೇಕು. ಶಾಲಾ ಶಿಕ್ಷಕರು ಕನ್ನಡ ಉಳಿಸುವ ಕೆಲಸ ಮಾಡಬೇಕು. ಸರ್ಕಾರಿ ನೌಕರರು, ಮಂತ್ರಿಗಳು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು ಎಂದರು.
ಭೈರಪ್ಪ ಅವರು ಶಿಕ್ಷಣ ಸಚಿವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಅವರು ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕಾಯ್ದೆ, ಕಾನೂನು ಬೇಕಾಗಿಲ್ಲ. ಆಡಳಿತಾತ್ಮಕ ಆದೇಶವಾದರೆ ಸಾಕು ಎಂದೂ ಜೋಶಿ ಹೇಳಿದರು.