ಸಮಗ್ರ ನ್ಯೂಸ್: ಕಮ್ಯುನಿಸ್ಟರಾಗಿ ನಾವು ಪಠ್ಯ ಪರಿಷ್ಕರಣೆ ಮಾಡಲಿಲ್ಲ. ಶಿಕ್ಷಣ ನಿಷ್ಠರಾಗಿ ಮಾಡಿದೆವು. ಪಠ್ಯ ಪರಿಷ್ಕರಣೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೇವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿವರವಾದ ಪತ್ರಿಕಾ ಹೇಳಿಕೆ ಮೂಲಕ ಸರ್ಕಾರದ ನಾಲ್ವರು ಸಚಿವರುಗಳು ಈ ಹಿಂದೆ ಮಾಡಿದ್ದ ಪ್ರತಿ ಆರೋಪಕ್ಕೂ ಅವರು ವಿವರಣೆಗಳ ಮೂಲಕ ತಿರುಗೇಟು ನೀಡಿದ್ದಾರೆ. ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ಹೆಚ್ಚು ವಿವರಗಳ ಸಮೇತ 7ನೇ ತರಗತಿಯ ಪಠ್ಯಕ್ಕೆ ಸೇರಿಸಿದ್ದೇವೆ. ಇಡೀ ಅಧ್ಯಾಯವನ್ನು ಮರು ಪರಿಷ್ಕರಣೆಯಲ್ಲಿ ತೆಗೆದುಹಾಕಿ ನಮ್ಮ ಮೇಲೆ ಸಚಿವರುಗಳು ಆರೋಪ ಹೊರಿಸುತ್ತಿದ್ದಾರೆ. ಹೀಗೆ 7ನೇ ತರಗತಿಯಿಂದ ತೆಗೆದು 10ನೇ ತರಗತಿಯಲ್ಲಿ ಮುಕ್ಕಾಲು ಪುಟದಷ್ಟುಮಾತ್ರ ಮೈಸೂರು ಒಡೆಯರ್ ವಿವರ ಕೊಟ್ಟು ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ನಮ್ಮ ಪಠ್ಯ ಪರಿಷ್ಕರಣೆಯು ಕಮ್ಯುನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಎಂದು ಸುಳ್ಳು ಆರೋಪ ಮಾಡಿರುವ ಸಚಿವರುಗಳಿಗೆ ನಮ್ಮ ಪಠ್ಯಗಳೇ ಉತ್ತರ ಹೇಳುತ್ತವೆ. ನಾವು ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಡಾ.ರಾಜಕುಮಾರ್ ಅವರ ಬಗ್ಗೆ ಪಾಠ ಸೇರಿಸಿದರೆ ಅದು ಕಮ್ಯುನಿಸ್ಟ್ ಪಠ್ಯವೇ? ಮಾಸ್ತಿ, ಗೋಪಾಲಕೃಷ್ಣ ಅಡಿಗ, ಗೊರೂರು, ಮೂರ್ತಿರಾಯರು, ಲಂಕೇಶ್, ಶಾಂತರಸ, ಸಾರಾ ಅಬೂಬಕರ್, ಚೆನ್ನಣ್ಣ ವಾಲೀಕರ ಮುಂತಾದವರ ಬರಹಗಳನ್ನು ಹೊಸದಾಗಿ ಸೇರಿಸಿ ಸಮತೋಲನ ಸಾಧಿಸಿದರೆ ಅದು ಕಮ್ಯುನಿಸ್ಟ್ ಸಿದ್ಧಾಂತವೇ? ಇನ್ನಾದರೂ ಸುಳ್ಳು ಆರೋಪಗಳು ನಿಲ್ಲಲಿ. ಮುಖ್ಯಮಂತ್ರಿಯವರು ಮರುಪರಿಷ್ಕರಣೆಯನ್ನು ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿ ಪ್ರಜಾಸತ್ತಾತ್ಮಕ ನಡೆಗೆ ಮುಂದಾಗಲಿ ಎಂದು ಬರಗೂರು ಒತ್ತಾಯಿಸಿದ್ದಾರೆ.
ನಾವು 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಹೊಸದಾಗಿ ಸೇರಿಸಿದ್ದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಇಡೀ ಅಧ್ಯಾಯವನ್ನು ಕೈಬಿಟ್ಟಿದ್ದಾರೆ. ಈ ಅಧ್ಯಾಯದಲ್ಲಿದ್ದ ರಾಣಿ ಅಬ್ಬಕ್ಕ, ಯಶೋದರಮ್ಮ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ ಅವರ ಎಲ್ಲಾ ವಿವರಗಳನ್ನು ತೆಗೆದಿದ್ದಾರೆ. ಇದು ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಹಾಗೆಯೇ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರ ಭಕ್ತಿಪಂಥ ಮತ್ತು ಸೂಫಿ ಪರಂಪರೆಯೆಂಬ ಅಧ್ಯಾಯದಲ್ಲಿದ್ದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಪುರಂದರದಾಸರು, ಕನಕದಾಸರು ಇವರ ಎಲ್ಲಾ ವಿವರ ತೆಗೆದು ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದ್ದಾರೆ.