ಸಮಗ್ರ ನ್ಯೂಸ್: ತಾಂತ್ರಿಕ ದೋಷದಿಂದ ಸರಕು ಸಾಗಾಟದ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗುವ ಭೀತಿ ಎದುರಿಸುತ್ತಿರುವ ಘಟನೆ ಮಂಗಳೂರಿನ 5.6 ನಾಟೆಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ನಡೆದಿದೆ. ಮಲೇಷ್ಯಾದಿಂದ ಲೆಬನಾಲ್‌ಗೆ ಸಾಗುತ್ತಿದ್ದ ಪ್ರಿನ್ಸೆಸ್ ಮಿರಾಲ್ ಎಂಬ ಹೆಸರಿನ ಹಡಗು ಇದಾಗಿದ್ದು, ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವಘಢ ಸಂಭವಿಸಿದೆ. ಹಡಗಿನಲ್ಲಿದ್ದ 15 ಮಂದಿ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.
ಈ ನೌಕೆ ಲೆಬನಾಲ್ ದೇಶದಿಂದ ಮಲೇಶ್ಯಾದಿಂದ ಉಕ್ಕಿನ ಕಾಯಿಲ್ ಗಳನ್ನು ಸಾಗಿಸುತಿತ್ತು. ಉಳ್ಳಾಲ ಕಡಲಕಿನಾರೆಯಿಂದ ಐದು ನಾಟಿಕಲ್ ಮೈಲ್ ದೂರದಲ್ಲಿ ಸಂಚಾರ ಮಾಡುತ್ತಿದ್ದ ಸಂಧರ್ಭದಲ್ಲಿ ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡು ತಳಸ್ಪರ್ಶ ಮಾಡಿ ಮುಳುಗುವ ಭೀತಿ ಎದುರಿಸಿದೆ.
ಕೂಡಲೇ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್ ಗಾರ್ಡ್ ಮೊರೆ ಹೋಗಿದ್ದಾರೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋಸ್ಟ್ ಗಾರ್ಡ್ ನೌಕೆಗಳಾದ ಅಮರ್ತ್ಯ ಮತ್ತು ವಿಕ್ರಂ ನೌಕೆಗಳನ್ನು ಸ್ಥಳಕ್ಕೆ ಕಳುಹಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಬ್ಬರದ ಕಡಲ ನಡುವೆ ಕೋಸ್ಟ್ ಗಾರ್ಡ್ ಸಾಹಸಮಯ ಕಾರ್ಯಾಚರಣೆ ನಡೆಸಿ 15 ಮಂದಿ ಸಿರಿಯನ್ ನಾವಿಕರನ್ನು ರಕ್ಷಣೆ ಮಾಡಿದೆ.
ಕೊನೆಗೆ ಕೋಸ್ಟ್ ಗಾರ್ಡ್ ಮೂಲಕ ನಾವಿಕರು ಸಹಾಯ ಕೇಳಿದ್ದಾರೆ. ಪ್ರಸ್ತುತ ಹಡಗಿನಲ್ಲಿದ್ದ ಎಲ್ಲಾ ನಾವಿಕರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಸದ್ಯ ಹಡಗಿನಲ್ಲಿ ಮೂರು ರಂಧ್ರಗಳು ಕಾಣಿಸಿಕೊಂಡಿದ್ದು ಆ ರಂಧ್ರದ ಮೂಲಕ ನೀರು ಒಳಹೊಕ್ಕುತ್ತಿದೆ. ಹಡಗು ಜಲಸಮಾಧಿಯಾದರೆ ಜಲಮಾಲಿನ್ಯವಾಗುವ ಆತಂಕ ಕೂಡಾ ಎದುರಾಗಿದೆ. ದಕ್ಷಿಣ ಕನ್ನಡ, ಉಡುಪಿ ಕಡಲ ತೀರದಲ್ಲಿ ಹಲವು ನೌಕೆಗಳು ಜಲಸಮಾಧಿಯಾಗಿದೆ. ಕಡಲ ಅಬ್ಬರ ಜಾಸ್ತಿ ಇರೋದರಿಂದ ಪ್ರಿನ್ಸಸ್ ಮಿರಾಲ್ ನೌಕೆ ಕೂಡಾ ಈ ಪಟ್ಟಿಗೆ ಸೇರ್ಪಡೆಯಾದಂತೆ ಕಾಣುತ್ತಿದೆ.