ಸಮಗ್ರ ನ್ಯೂಸ್: ಒಂದೇ ಕುಟುಂಬದ ಒಂಬತ್ತು ಸದಸ್ಯರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದ್ದು, ಇಡೀ ರಾಜ್ಯ ಬೆಚ್ಚಿ ಬಿದ್ದಿದೆ.
ಮುಂಬೈನಿಂದ 350 ಕಿಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಎಂಬಲ್ಲಿನ ಮನೆಯೊಂದರಲ್ಲಿ 9 ಮೃತ ದೇಹಗಳು ಪತ್ತೆಯಾಗಿವೆ. “ನಾವು ಒಂದೇ ಮನೆ ಒಳಗೆ ಒಂಬತ್ತು ಶವಗಳನ್ನು ಕಂಡು ದಿಗ್ಭ್ರಮನೆಗೆ ಒಳಗಾದೆವು. ಮೂರು ಶವಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ, ಆರು ಶವಗಳು ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ” ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ. ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಈ ವಿಚಾರ ಕೇಳಿ ಅಕ್ಕಪಕ್ಕದ ಜನರು ಭಯಭೀತಿ ಗೊಂಡಿದ್ದಾರೆ.
ಮೃತರನ್ನು ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಪೋಪಟ್ ಯಲ್ಲಪ್ಪ ವ್ಯಾನ್ಮೋರೆ (52), ಸಂಗೀತಾ ಪೋಪಟ್ ವ್ಯಾನ್ಮೋರೆ (48), ಅರ್ಚನಾ ಪೋಪಟ್ ವ್ಯಾನ್ಮೋರೆ (30), ಶುಭಂ ಪೋಪಟ್ ವಾನ್ಮೋರೆ (28), ಮಾಣಿಕ್ ಯಲ್ಲಪ್ಪ ವ್ಯಾನ್ಮೋರೆ (49), ರೇಖಾ ಮಾಣಿಕ್ ವ್ಯಾನ್ಮೋರೆ (49) ಮತ್ತು ಆದಿತ್ಯ ಮಾಣಿಕ್ ವ್ಯಾನ್ (15), ಅನಿತಾ ಮಾಣಿಕ್ ವ್ಯಾನ್ಮೋರ್ (28) ಮತ್ತು ಅಕ್ಕತೈ ವ್ಯಾನ್ಮೋರ್ (72) ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ಇದೊಂದು ಸಾಮೂಹಿಕ ಆತ್ಮಹತ್ಯೆ ಅಂತ ಪೊಲೀಸರು ಶಂಕಿಸಿದ್ದಾರೆ. ಆದರೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ಬಲವಾದ ಕಾರಣಗಳು ಇರಲಿಲ್ಲ ಅಂತ ಸಂಬಂಧಿಕರು ಹೇಳಿದ್ದಾರೆ. ಹೀಗಾಗಿ ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ನಿಗೂಢವಾಗಿದೆ.