ಸಮಗ್ರ ನ್ಯೂಸ್: ಸಾಧನೆಯ ಹಾದಿಯಲ್ಲಿ ಕೌಶಿಕ್ ಮತ್ತೊಮ್ಮೆ ಮಿನುಗಿದ್ದಾರೆ. ಅಂಗವೈಕಲ್ಯ ಮೀರಿನಿಂತ ಅವರು ಎಸ್ಸೆಸ್ಸೆಲ್ಸಿಯಂತೆ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 524 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಂಟ್ವಾಳದ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಕಾಲಿನಲ್ಲಿ ಪರೀಕ್ಷೆ ಬರೆದು ಎಸ್ಸೆಸ್ಸೆಲ್ಸಿಯಲ್ಲಿ 424 ಅಂಕ ಗಳಿಸಿದ್ದರು. ಅಂದು ಊರಜನರು ಮತ್ತು ಜನಪ್ರತಿನಿಧಿಗಳು ತೋರಿದ ಪ್ರೀತಿಗೆ ಮನಸೋತಿದ್ದ ಅವರಿಗೆ ಜೀವನ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಮತ್ತಷ್ಟು ಹುಮ್ಮಸ್ಸು ಬಂದಿತ್ತು. ಅದಕ್ಕೆ ಬೆಂಬಲವಾಗಿ ನಿಂತದ್ದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ. ಉಚಿತ ಶಿಕ್ಷಣ ಯೋಜನೆಯಲ್ಲಿ ಪುಸ್ತಕ, ಕಲಿಕಾ ಸಾಮಗ್ರಿ ಮತ್ತು ಸಮವಸ್ತ್ರ ಒದಗಿಸಿದ ಸಂಸ್ಥೆಗೆ ಕೌಶಿಕ್ ಗೌರವ ತಂದುಕೊಟ್ಟಿದ್ದಾರೆ.
ಜನಿಸುವಾಗಲೇ ಕೌಶಿಕ್‌ಗೆ ಕೈಗಳು ಇರಲಿಲ್ಲ. ಬಲಭಾಗದಲ್ಲಿ ಹೆಗಲಿನಿಂದ ಈಚೆ ಕೈಯ ಲಕ್ಷಣವೇ ಇಲ್ಲ, ಎಡಭಾಗದಲ್ಲಿ ಮೊಣಕೈ ವರೆಗೆ ಕೈಯನ್ನು ಹೋಲುವ ರೀತಿಯ ಮಾಂಸ ಜೋತಾಡುತ್ತಿದೆ. ಬೀಡಿ ಕಾರ್ಮಿಕೆ, ಅಮ್ಮ ಜಲಜಾಕ್ಷಿ ಕಾಲುಬೆರಗಳುಗಳ ನಡುವೆ ಬಳಪದ ಕಡ್ಡಿ ಸಿಕ್ಕಿಸಿ ಅಕ್ಷರ ಬರೆಯಲು ಕಲಿಸಿದ್ದರು. ಅದೇ ಅವರ ಮೊದಲ ಪಾಠವಾಗಿತ್ತು. ಬಂಟ್ವಾಳದ ಎಸ್‌ವಿಎಸ್ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಓದಿದ್ದರು.