Ad Widget .

‘ಅಗ್ನಿಪಥ್’ ಯೋಜನೆ; ಸಾಧಕ ಬಾಧಕಗಳೇನು?

ಸಮಗ್ರ ವಿಶೇಷ: ಸುದೀರ್ಘವಾದ ಇತಿಹಾಸ ಮತ್ತು ಭವ್ಯವಾದ ಪರಂಪರೆಯಿರುವ ಯಾವುದೇ ಸಂಸ್ಥೆ ಕೂಡ ಬದಲಾವಣೆಯ ಗಾಳಿಗೆ ಪ್ರತಿರೋಧ ಒಡ್ಡುವುದು ಸಹಜ. ಬದಲಾವಣೆಯೆ ಜಗದ ನಿಯಮವಾದ ಕಾರಣದಿಂದಾಗಿ ಬದಲಾವಣೆಗೆ ತೆರೆದುಕೊಳ್ಳದಿರುವ ಸಂಸ್ಥೆ ಎಷ್ಟೇ ಸದೃಢವಾಗಿದ್ದರೂ ಅದು ಕಾಲಕ್ರಮೇಣ ಒಳಗಿನಿಂದ ಕೃಶವಾಗುತ್ತಾ ಹೋಗುತ್ತದೆ.

Ad Widget . Ad Widget .

ಭಾರತೀಯ ಸಶಸ್ತ್ರ ಪಡೆಯ ಸೈನಿಕರ ನೇಮಕಾತಿಯ ಹೊಸಾ ಯೋಜನೆಯಾದ ಅಗ್ನಿಪಥದಡಿಯಲ್ಲಿ ಪ್ರತಿವರ್ಷ ಹದಿನೇಳುವರೆ ವರ್ಷ ಮತ್ತು ಇಪ್ಪತ್ತೊಂದು ವರ್ಷಗಳ ನಡುವಿರುವ ನಲವತ್ತಾರು ಸಾವಿರ ಸೈನಿಕರನ್ನು ನಾಲ್ಕು ವರ್ಷಗಳ ಗುತ್ತಿಗೆಯ ಆಧಾರದಲ್ಲಿ ಅಗ್ನಿವೀರರನ್ನಾಗಿ ನೇಮಕಾತಿ ಮಾಡುವ ಯೋಜನೆಯನ್ನು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಅಗ್ನಿಪಥ ಯೋಜನೆಯ ಕುರಿತು ಪರವಿರೋಧದ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಇದರ ದೂರಗಾಮಿ ಸಾಧಕ ಬಾಧಕಗಳ ಕುರಿತಾಗಿ ಚರ್ಚಿಸಲು ಈ ಲೇಖನವನ್ನು ಬರೆದಿದ್ದೇನೆ.

Ad Widget . Ad Widget .

ಇಂದಿನ ದಿನ ಭಾರತೀಯ ಸಶಸ್ತ್ರ ಪಡೆಗಳ ಯೋಧರ ಸರಾಸರಿ ವಯಸ್ಸು ಮೂವತ್ತೆರಡು ಆಗಿರುತ್ತದೆ. ಅಗ್ನಿಪಥದಿಂದಾಗಿ ಸೈನಿಕರ ಸರಾಸರಿ ವಯಸ್ಸು ಇಪ್ಪತ್ತಾರರ ಆಸುಪಾಸಿಗೆ ಇಳಿಯುವುದರಿಂದ ಯುದ್ಧ ಭೂಮಿಯಲ್ಲಿ‌ ಸೇನೆಗೆ ಹೆಚ್ಚಿನ ಲಾಭವಾಗುವುದರ ಜೊತೆಗೆ ಸೇನೆಯ ಕಾರ್ಯಕ್ಷಮತೆ ಹೆಚ್ಚಾಗುವುದೆಂದು ಸರಕಾರವು ಘೋಷಿಸಿದೆ. ಭಾರತೀಯ ಸಶಸ್ತ್ರ ಪಡೆಗಳನ್ನು ಹೆಚ್ಚು ಯುವ, ಆಧುನಿಕ ಮತ್ತು ಟೆಕ್ ಸೇವಿ ಮಾಡುವುದು ಈ ಅಗ್ನಿವೀರರ ಪ್ರವೇಶದಿಂದ ಸಾಧ್ಯವಾಗಲಿದೆಯೆಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ನುಡಿದದ್ದನ್ನು ಮೊನ್ನೆ ಮಾದ್ಯಮಗಳು ದಾಖಲಿಸಿವೆ. ಅಗ್ನಿವೀರರಿಗೆ ಕೊಡುವ ಸಂಬಳ ಮತ್ತು ಸೌಲಭ್ಯಗಳ ಜೊತೆಗೆ ಶೇಕಡ 25% ಸೈನಿಕರನ್ನು ಹದಿನೈದು ವರ್ಷಗಳ ಕಾಲ ಪಿಂಚಣಿ ಸೌಲಭ್ಯವಿರುವ ದೀರ್ಘಕಾಲದ ಸೇವೆಗೆ ಉಳಿಸಿಕೊಳ್ಳಲಾಗುತ್ತದೆ ಎಂಬ ವಿಚಾರಗಳೂ ಅಗ್ನಿಪಥ ಯೋಚನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಅಗ್ನಿಪಥ ಯೋಜನೆಯ ಕುರಿತಾಗಿ ಭಾರತೀಯ ಸರಕಾರವು ಹಲವಾರು ವರ್ಷಗಳಿಂದ ಚಿಂತನೆಯನ್ನು ನಡೆಸಿರುವುದರ ಹಿಂದೆ ಇತರ ಕಾರಣಗಳೂ ಇದ್ದವು. ಐದು ಲಕ್ಷ ಕೋಟಿಗಿಂತಲೂ ಹೆಚ್ಚಿರುವ ಢಿಪನ್ಸ್ ಬಜೆಟಿನಲ್ಲಿ ಸುಮಾರು ಒಂದು ಕಾಲು ಲಕ್ಷ ಕೋಟಿ ಹಣವನ್ನು ಮಾಜಿ ಸೈನಿಕರ ಪಿಂಚಣಿಗೆ ಮೀಸಲಿಡಲಾಗುತ್ತದೆ. ಮಾಜಿ ಸೈನಿಕರ ಪಿಂಚಣಿ ಮತ್ತು ಸಶಸ್ತ್ರ ಪಡೆಗಳ ಮಾಸಿಕ ಸಂಬಳಕ್ಕೆ ಡಿಫೆನ್ಸ್ ಬಜೆಟಿನಲ್ಲಿ ಹಣವನ್ನು ಎತ್ತಿಟ್ಟ ನಂತರ ಉಳಿಯುತ್ತಿದ್ದ ಕಾಲು ಭಾಗದಲ್ಲಿ ಸೇನೆಯ ಆಧುನಿಕರಣಕ್ಕೆ ಆರ್ಥಿಕ ಸಂಪನ್ಮೂಲಗಳು ಮಿಕ್ಕುತ್ತಿರಲಿಲ್ಲ. ಭಾರತ ಸಹಿತ ಎಲ್ಲಾ ದೇಶಗಳಲ್ಲಿ ಹೆಚ್ಚುತ್ತಿರುವ ಜನರ ಜೀವಿತಾವಧಿಯ ಕಾರಣದಿಂದಾಗಿ ಸೈನಿಕರಿಗೆ ಪಿಂಚಣಿ ನೀಡುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಸರಕಾರವು ದೀರ್ಘಕಾಲದಿಂದ ಚಿಂತಿಸುತ್ತಿತ್ತು.

ಸೇನೆಯಲ್ಲಿ ಅಲ್ಪಾವಧಿಯ ಪಿಂಚಣಿ ರಹಿತ ಸೇವೆಯನ್ನು ಸಲ್ಲಿಸಲು ಸರಕಾರಗಳು ಯೋಜನೆಗಳನ್ನು ತಯಾರಿಸಿ ಕಾರ್ಯರೂಪಕ್ಕೆ ತಂದಿರುವುದು ಇದೇ ಮೊದಲಲ್ಲ. ಅಧಿಕಾರಿಗಳ ವಿಭಾಗದಲ್ಲಿ ಐದು ಮತ್ತು ಹತ್ತು ವರ್ಷಗಳ ಪಿಂಚಣಿ ರಹಿತ ಸೇವೆಯಾದ ಶಾರ್ಟ್ ಸರ್ವಿಸ್ ಕಮಿಷನ್ ಯೋಜನೆಗಳು ಭಾರತೀಯ ಆರ್ಮಿ, ನೇವಿ ಮತ್ತು ವಾಯುಸೇನೆಯಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಹಲವಾರು ದಶಕಗಳಿಂದ ಜಾರಿಯಲ್ಲಿದೆ. ಆ ಯೋಜನೆಯನ್ನು ಆರಂಭಿಸುವಾಗಲೂ ಭಾರತೀಯ ಯುವ ಜನತೆಯನ್ನು ಸರಕಾರ ” Use and throw” ಮಾಡುವ ಹುನ್ನಾರದಲ್ಲಿದೆಯೆಂಬ ಅಪಸ್ವರಗಳು ಎದ್ದಿದ್ದವು. ಆದರೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ‌ ಶಾರ್ಟ್ ಸರ್ವಿಸ್ ಸೇವೆ ಸಲ್ಲಿಸಿದವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಮತ್ತು ತಮ್ಮ ಸೇವೆಯ ಅವಧಿ ಮುಗಿದ ನಂತರ ಸೇನೆಯ ಮೌಲ್ಯಗಳನ್ನು ತಾವು ಕೆಲಸ ಮಾಡುವ ನಾಗರೀಕ ಸಮಾಜದಲ್ಲಿ ಅಳವಡಿಸಿಕೊಂಡಿದ್ದಾರೆ. ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಡೆಕ್ಕನ್ ಏರ್ಲೈನ್ಸ್ ಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಮಾಜಿ ವಿತ್ತ ಮತ್ತು ವಿದೇಶಾಂಗ ಸಚಿವರಾಗಿದ್ದ ಕ್ಯಾಪ್ಟನ್ ಜಸ್ವಂತ್ ಸಿಂಗ್ ಮುಂತಾದವರು ಕೂಡ ಸೇನೆಯಲ್ಲಿ ಅಲ್ಪಾವಧಿಯ ಪಿಂಚಣಿರಹಿತ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ. ಮಹಿಳಾ ಅಧಿಕಾರಿಗಳ ನೇಮಕಾತಿಯಾದಾಗಲೂ ಎದ್ದ ಅಪಸ್ವರಗಳನ್ನು ಅಡಿಗಿಸುವಲ್ಲಿ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಾಧನೆಯ ಎಷ್ಟು ಯಶಸ್ವಿಯಾಗಿದೆಯೆಂದರೆ ಈಗ ಮಹಿಳೆಯರು ವಾಯುಸೇನೆಯಲ್ಲಿ ಪೈಟರ್ ಪೈಲೆಟ್ಗಳಾಗಿ ನೇಮಕವಾಗಿದ್ದಾರೆ.

ಇಸ್ರೇಲ್, ಸ್ವೀಡನ್, ನಾರ್ವೇ, ರಷ್ಯಾ ಮುಂದಾದ ದೇಶಗಳಲ್ಲಿ ಪಿಂಚಣಿರಹಿತ ಅಲ್ಪಾವಧಿಯ ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಲಾಗಿದೆ. ಇಸ್ರೇಲ್ ದೇಶದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಕ್ರಮವಾಗಿ ಮೋವತ್ತು ಮತ್ತು ಇಪ್ಪತ್ತೆರಡು ತಿಂಗಳ ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಿರುವುದರಿಂದ ಆ ದೇಶವಾಸಿಗಳಲ್ಲಿರುವ ರಾಷ್ಟ್ರೀಯ ಪ್ರಜ್ಞೆ ಇಸ್ರೇಲನ್ನು ಶತ್ರು ರಾಷ್ಟ್ರಗಳ ನಡುವೆಯೂ ತಲೆಯೆತ್ತಿ ನಿಲ್ಲುವಂತೆ ಮಾಡಿದೆ‌. ಪ್ರಪಂಚದ ಅನೇಕ‌ ರಾಷ್ಟ್ರಗಳಲ್ಲಿ ಕಡ್ಡಾಯವಲ್ಲದ ಅಲ್ಪಾವಧಿಯ ಮಿಲಿಟರಿ ಸೇವೆಯನ್ನು ಮಾಡಬಹುದಾದ ಅವಕಾಶವನ್ನು ಅಯಾ ರಾಷ್ಟ್ರಗಳು ತಮ್ಮ ನಾಗರೀಕರಿಗೆ ತೆರೆದಿಟ್ಟಿವೆ. ಎಲ್ಲಾ ಉದ್ಯೋಗಗಳು ಮನುಷ್ಯನ ಜೀವನಶೈಲಿಯನ್ನು ಸುಖಮಯಗೊಳಿಸಿದರೆ ಮಿಲಿಟರಿ ಮಾತ್ರ ವಿರುದ್ಧ ದಿಕ್ಕಿನಲ್ಲಿ ಕೆಲಸಮಾಡುತ್ತದೆ. ಮಿಲಿಟರಿ ಆರಾಮದ ವಾತಾವರಣದಲ್ಲಿದ್ದವರನ್ನು ಹಿಮಪರ್ವತಗಳ ಮೇಲೆ ಮತ್ತು ಮರುಭೂಮಿಯಲ್ಲಿ ಗಡಿಕಾಯಲು ತಯಾರುಮಾಡುತ್ತದೆ. ಸಂಬಳ ಮತ್ತು ಸೌಲಭ್ಯಗಳ ಆಚೆಗೂ ಯೋಚಿಸಬಲ್ಲ ಮಾನಸಿಕತೆಯಿಲ್ಲದವರಿಗೆ ಮಿಲಿಟರಿ ಜೀವನ ಹೇಳಿಮಾಡಿಸಿದ್ದಲ್ಲ. ಸಂಬಳ ಅಥವಾ ಪಿಂಚಣಿರಹಿತವಾದ ಅಲ್ಪಾವಧಿಯ ಸೇವೆಯನ್ನು ಸಲ್ಲಿಸಲು ಭಾರತದಂತಹಾ ದೇಶದಲ್ಲಿ ಕೋಟ್ಯಾಂತರ ಜನರು ತಯಾರಿರುವಾಗ ಅಂತಹಾ ಉತ್ಸಾಹಿಗಳನ್ನು ದೇಶಕಾಯಲು ಬಳಸಿಕೊಂಡರೆ ತಪ್ಪೇನು?

ಹತ್ತನೆಯ ತರಗತಿ ಪಾಸಾಗಿರುವ ಈ ಅಗ್ನಿವೀರ್ ಸೈನಿಕರಿಂದ ಒಬ್ಬ ಜನರಲ್ ಡ್ಯೂಟಿ ಸೈನಿಕನ ಕೆಲಸಗಳನ್ನು ಮಾತ್ರ ಮಾಡಿಸಲು ಸಾಧ್ಯವಾಗುತ್ತದೆ. ಸಶಸ್ತ್ರ ಪಡೆಗಳ ರಡಾರ್, ಮಿಸೈಲ್, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ತರಬೇತಿಯ ಅಗತ್ಯವಿರುವುದರಿಂದ ಅಗ್ನಿವೀರರಲ್ಲಿ ಶಾಶ್ವತವಾಗಿ ನೇಮಕಾತಿಯಾಗುವ 25% ಸೈನಿಕರನ್ನು ಈ ವಿಭಾಗದಲ್ಲಿ ಮುಂದೆ ತರಬೇತುಗೊಳಿಸಲಾಗುತ್ತದೆ. ಮಿಲಿಟರಿಯ ಜೀವನ ವಿಧಾನಕ್ಕೆ ಹೊಂದಿಕೊಳ್ಳಲು ಕಷ್ಟವಾಗುವ ಸೈನಿಕರಿಗೆ ಮಿಲಿಟರಿಯಿಂದ ಹೊರಗೆ ಹೋಗುವ ವ್ಯವಸ್ಥೆಯನ್ನು ಕಲ್ಪಿಸದಿದ್ದರೆ ಸೇನೆಯಲ್ಲಿ ಅತೃಪ್ತರ ಸಂಖ್ಯೆಯು ಹೆಚ್ಚಾಗಿ ಅಲ್ಲಿನ ವಾತಾವರಣವು ನಕಾರಾತ್ಮಕವಾಗುವ ಸಂಭವವೂ ಇದೆ. ನಾಲ್ಕು ವರ್ಷಗಳ ಸೇವೆಯ ತರುವಾಯ ಪ್ರತಿಯೊಬ್ಬ ಯುವಕನಿಗೂ ಸೇನೆಯ ವಾತಾವರಣದ ಸ್ಪಷ್ಟವಾದ ಚಿತ್ರಣದ ಸಿಗುತ್ತದೆ. ತನ್ನ ಸಾಮರ್ಥ್ಯಕ್ಕೆ ಮಿಲಿಟರಿ ತಕ್ಕದಾದ ವೇದಿಕೆಯಲ್ಲದಿದ್ದರೆ ಸೇನೆಯಲ್ಲಿ ಮೈಗೂಡಿಸಿಕೊಂಡ ಕೌಶಲ್ಯಗಳೊಂದಿಗೆ ಆತ ನಾಗರೀಕ ಸಮಾಜದ ಜೀವನಕ್ಕೆ ಮರಳುವ ಅವಕಾಶವನ್ನು ಕಲ್ಪಸುವುದರಿಂದ ಅದೇ ಜಾಗದಲ್ಲಿ ಸೇವೆ ಸಲ್ಲಿಸಲು ಮತ್ತೊಬ್ಬ ಉತ್ಸಾಹಿ ಯುವಕನಿಗೆ ಅವಕಾಶ ದೊರಕುತ್ತದೆ. ನಾಲ್ಕು ವರ್ಷಗಳ ಅಲ್ಪಾವಧಿಯ ವಾಲಂಟರಿ ಸೇವೆಯಾದ ಈ ಯೋಜನೆಯಿಂದ ನಮ್ಮ ದೇಶದ ಯುವ ಜನತೆಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ ಮತ್ತು ವರ್ಷಗಳು ಕಳೆದಂತೆ ಸೇನೆಯ ವಾತಾವರಣದಲ್ಲಿ ಕೆಲಸ ಮಾಡಿ ಅನುಭವವಿರುವ ಲಕ್ಷಾಂತರ ಜನರು ನಮ್ಮ ನಾಗರೀಕ ಸಮಾಜಕ್ಕೆ ಮರಳಿರುತ್ತಾರೆ. ಸೇನೆಯ ಮೌಲ್ಯಗಳಾದ ಶಿಸ್ತು, ಸಮಯಪಾಲನೆ, ಕರ್ತವ್ಯ ಪ್ರಜ್ಞೆ , ಜಾತ್ಯಾತೀತ ನಿಲುವುಗಳು ಮತ್ತು ದೇಶದ ಅಖಂಡತೆಯ ಬಗ್ಗೆ ಗೌರವವಿರುವ ಲಕ್ಷಾಂತರ ಜನರು ನಾಗರೀಕ ಸಮಾಜದಲ್ಲಿದ್ದರೆ ದೇಶದ ಆಂತರಿಕ ಮತ್ತು ಸಾಮಾಜಿಕ ವಾತಾವರಣ ಹೆಚ್ಚು ಸ್ವಚ್ಚವಾಗಿರುತ್ತದೆ.

ಅಗ್ನಿಪಥ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸದಿದ್ದರೆ ಸಶಸ್ತ್ರ ಪಡೆಗಳಲ್ಲಿ ಗೊಂದಲವುಂಟಾಗಿ ದೇಶದ ಭದ್ರತೆ ತೊಡಕಾಗಬಹುದು. ಸಾಮಾನ್ಯ ಸೈನಿಕನಿಗೆ ಒಂಬತ್ತು ತಿಂಗಳಿಂದ ಒಂದು ವರ್ಷಗಳ ಕಾಲವಿದ್ದ ಮಿಲಿಟರಿ ತರಬೇತಿಯನ್ನು ಈ ಯೋಜನೆಯಲ್ಲಿ ಆರು ತಿಂಗಳುಗಳಿಗೆ ಕಡಿತಗೊಳಿಸಲಾಗಿದೆ‌. ಆ ಕಾರಣದಿಂದಾಗಿ ಅಗ್ನಿವೀರರ ತರಬೇತಿ ಮಾದರಿಯೂ ಇತರ ದೇಶಗಳಂತೆ ಹೆಚ್ಚು ಆಧುನಿಕವಾಗಿರುತ್ತದೆ. ದೀರ್ಘಕಾಲ ಒಂದೇ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗುವುದರಿಂದ ಭಾರತೀಯ ಸೇನೆಯ ರೆಜಿಮೆಂಟಲ್ ಪರಂಪರೆ ಕೂಡ ಮೊದಲಿನಂತಿರುವುದಿಲ್ಲ. ಎರಡು ಶತಮಾನಗಳ ಹಿಂದೆ ಬ್ರಿಟಿಷರು ಪಾಲಿಸುತ್ತಿದ್ದ “ಆಲದ ಮರಕ್ಕೆ ಸುತ್ತು ಬರುವ” ಕೆಲವು ಸಂಪ್ರದಾಯಗಳ ಕಾಲಾವಧಿ ಮುಗಿದಿರುವುದನ್ನು ವಿಶ್ವದ ಇತರ ದೇಶದ ಸೇನೆಗಳು ಗುರುತಿಸಿದಂತೆ ಭಾರತೀಯ ಸೇನೆಗೂ ತನ್ನ ಕೆಲವು “ಕೊಲೋನಿಯಲ್” ಕ್ರಮಗಳ ಬಗ್ಗೆ ಪುನರ್ಪರಿಶೀಲಿಸಲು ಇದು ಸಕಾಲವಾಗಿದೆ.

ಅಗ್ನಿಪಥ ಯೋಜನೆಯ ಕೆಲವು ನೀತಿ-ನಿಯಮಗಳನ್ನು ಸರಕಾರ ಮುಂದಿನ ದಿನಗಳಲ್ಲಿ ಪುನರ್ಪರಿಶೀಲಿಸಬೇಕಾಗಬಹುದು. ಗರಿಷ್ಠ ವಯೋಮಿತಿಯನ್ನು ಇಪ್ಪತ್ತೊಂದು ವರ್ಷಗಳಿಗೆ ಇಳಿಸಿರುವುದರಿಂದ ಈಗಾಗಲೇ ಪದವಿ ಶಿಕ್ಷಣ ಪಡೆದು ಸೇನೆಗೆ ಸೇರುವ ಆಕಾಂಕ್ಷೆಯಿದ್ದ ಒಂದಷ್ಟು ಯುವಸಮೂಹ ವಯಸ್ಸಿನ ಕಾರಣದಿಂದ ಈ ಅವಕಾಶದಿಂದ ವಂಚಿತವಾಗಲೂ ಬಹುದು. ಗ್ರ್ಯಾಚುಟಿ ಹಣವನ್ನು ಪಡೆಯಲು ನಿಯಮಗಳ ಪ್ರಕಾರ ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸುವುದು ಅನಿವಾರ್ಯವಾಗಿರುತ್ತದೆ. ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಗ್ರ್ಯಾಚುಟಿ ಸೌಲಭ್ಯಗಳನ್ನು ನೀಡುಲು ಬರುವುದಿಲ್ಲ ಮತ್ತು ಈಗಿರುವ ನಿಯಮಗಳ ಪ್ರಕಾರ ಗ್ರ್ಯಾಚುಟಿ ಪಡೆಯದೆ ಸೇನೆಯಿಂದ ಹೊರಬಂದರೆ ಅವರನ್ನು “ಮಾಜಿಸೈನಿಕರು” ಎಂದು ಪರಿಗಣಿಸಿಲು ತಾಂತ್ರಿಕ ತೊಡಕಾಗುತ್ತದೆ. ಐದು ವರ್ಷಗಳ ಸೇವೆ ಸಲ್ಲಿಸಿ ಗ್ರ್ಯಾಚುಟಿಗೆ ಅರ್ಹರಾದರೆ ಅಗ್ನಿವೀರರಿಗೆ ಒಂದಷ್ಟು ಆರ್ಥಿಕ ಲಾಭವಾಗುವುದು ಮತ್ತು ಅದು ಪಿಂಚಣಿಯಂತೆ ಪ್ರತಿ ತಿಂಗಳು ನೀಡಬೇಕಾದ ಆರ್ಥಿಕ ಹೊರೆಯಾಗುವುದಿಲ್ಲ. ಅಗ್ನಿಪಥ ಯೋಜನೆಯು ದೇಶದ ಯುವಸಮೂಹವನ್ನು ಎಳ್ಳಷ್ಟೂ ಆಕರ್ಷಿಸದಿದ್ದರೆ ಪ್ಯಾರಮಿಲಿಟರಿ, ಪೋಲಿಸ್ ನೌಕರಿಯನ್ನು ಯುವಸಮೂಹ ಮೊದಲಿಗೆ ಆಯ್ದು, ಸಶಸ್ತ್ರ ಪಡೆಗಳು ಯುವಜನತೆಯ ಕಡೆಯ ಆಯ್ಕೆಯಾಗಬಹುದು.

ಅಗ್ನಿಪಥದ ಕೆಲವು ನೀತಿನಿಯಮಗಳನ್ನು ದೇಶದ ಆರ್ಥಿಕ ಪರಿಸ್ಥಿತಿ, ಸೇನೆಯ ಮನೋಬಲ ಮತ್ತು ಅಗ್ನಿವೀರರ ಭವಿಷ್ಯವನ್ನು ಮನಸಿನಲ್ಲಿಟ್ಟುಕೊಂಡು ಸರಕಾರ ಕೊಂಚ ತಿದ್ದುಪಡಿಗಳನ್ನು ಮಾಡಲೂಬಹುದು.ಆದರೆ ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಯ ನವೀಕರಣ ಮತ್ತು ಡಿಫೆನ್ಸ್ ಬಜೆಟಿನ ಮೇಲಿರುವ ಪಿಂಚಣಿ ಹೊರೆಯನ್ನು ಕಡಿಮೆಮಾಡುವುದು ದೇಶದ ಹಿತದೃಷ್ಟಿಯಿಂದ ಅನಿವಾರ್ಯ. ಭಾರತದ ದೇಶದ ಸುರಕ್ಷಿತೆಗಾಗಿ ಸೇನೆಯಿದೆ ಹೊರತು ಪಾಕಿಸ್ತಾನದಲ್ಲಿ ನಡೆಯುವಂತೆ ಸೇನೆಯ ಎಲ್ಲಾ ಬೇಡಿಕೆಗಳನ್ನು ಪೂರೈಸಲು ದೇಶವನ್ನು ಅಡವಿಡಲು ಬರುವುದಿಲ್ಲ.

ಈ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸುವಲ್ಲಿ ತೋರಿಸುತ್ತಿರುವ ಉತ್ಸಾಹವನ್ನು ಇದೇ ಅಗ್ನಿವೀರರು ತಮ್ಮ ನಾಲ್ಕು ವರ್ಷಗಳ ಸೇವಾವಧಿ ಮುಗಿಸಿ ಹೊರಬರುವಾಗಲೂ ಸರಕಾರ ತೋರಿಸಬೇಕಾಗುತ್ತದೆ. ಶಾರ್ಟ್ ಸರ್ವಿಸ್ ಕಮಿಶನ್ ಸೇವೆ ಸಲ್ಲಿಸಿ ಹೊರಬಂದ ಅಧಿಕಾರಿಗಳಿಗೆ ದೇಶದ ಪ್ರಖ್ಯಾತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಆರು ತಿಂಗಳ ಉಚಿತ ಕೋರ್ಸ್ ಮಾಡುವ ಅವಕಾಶವನ್ನು ಕಲ್ಪಿಸಿ ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದಂತೆ ದೇಶಕ್ಕಾಗಿ ತಮ್ಮ ಯವ್ವನವನ್ನು ಸಮರ್ಪಿಸಿದ ಅಗ್ನಿವೀರರನ್ನೂ ಸರಕಾರವು ಮರೆಯುವಂತ್ತಿಲ್ಲ. ಅಗ್ನಿವೀರರು ತಮ್ಮ ಅವಧಿ ಮುಗಿದ ನಂತರ ಹೊರಬರುವಾಗ, ಹನ್ನೆರಡನೆಯ ತರಗತಿಯ ವಿದ್ಯಾರ್ಹತೆಯ ಪ್ರಮಾಣ ಪತ್ರವನ್ನು ಸೇನೆಯ ಕೋರ್ಸಿನ ಮೂಲಕ ಪಡೆದಿರುವುದರಿಂದ, ಹೆಚ್ಚಿನ ಶಿಕ್ಷಣ ಪಡೆಯಲು ಆಸಕ್ತಿಯಿರುವ ಅಗ್ನಿವೀರರಿಗೆ ಸರಕಾರವು ದೇಶದ ಎಲ್ಲಾ ಯುನಿವರ್ಸಿಟಿಗಳಲ್ಲಿ ಉಚಿತ ಪದವಿ ಶಿಕ್ಷಣಕ್ಕೆ ಮೀಸಲಾತಿಯನ್ನು ಕಲ್ಪಿಸಬೇಕಾಗುತ್ತದೆ. ಅಗ್ನಿವೀರರಿಗೆ ಪೋಲಿಸ್ ಮತ್ತು ಸರಕಾರದ ವಿವಿಧ ಇಲಾಖೆಗಳ ನೌಕರಿಗಳಲ್ಲಿ ಸೂಕ್ತ ಮೀಸಲಾತಿಯನ್ನು ಕಲ್ಪಿಸಿದಲ್ಲಿ ನಿವೃತ್ತ ಅಗ್ನಿವೀರರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಸಮಗ್ರವಾಗಿ ಯೋಚಿಸಿ ಸಮರ್ಪಕವಾಗಿ ಜಾರಿಗೊಳಿಸಿದ್ದಲ್ಲಿ ಅಗ್ನಿಪಥದಿಂದಾಗಿ ದೇಶಕ್ಕೂ, ಸಶಸ್ತ್ರ ಪಡೆಗೂ ಮತ್ತು ಅಗ್ನಿವೀರರಿಗೂ ಒಳಿತಾಗುತ್ತದೆ. ತ್ತೊಂಬತ್ತರ ದಶಕದ ಆರ್ಥಿಕ ಉದಾರೀಕರಣದಂತೆ, ಈಗ ಸಶಸ್ತ್ರ ಪಡೆಗಳ ನೇಮಕಾತಿಯ ನವೀಕರಣವೂ ನಮ್ಮ ದೇಶಕ್ಕೆ ವಾಸ್ತವದ ಜೊತೆಗೆ ಹೆಚ್ಚೆಹಾಕಬೇಕಾದ ಅನಿವಾರ್ಯತೆಯಿದೆ. ಒಂದು ಕಡೆ ಪಾಕಿಸ್ತಾನ ಮತ್ತೊಂದು ಕಡೆ ಚೀನಾ ನಮ್ಮತ್ತ ಕಣ್ಣಿಟ್ಟಿರುವಾಗ ಸಶಸ್ತ್ರ ಪಡೆಗಳನ್ನು ಸಶಕ್ತಗೊಳಿಸುವಲ್ಲಿ ಭಾರತ ಎಡವದಂತೆ ಹೆಚ್ಚಹಾಕುವುದು ಅತ್ಯಗತ್ಯವಾಗಿದೆ.

ಮೇಜರ್ ಡಾ ಕುಶ್ವಂತ್ ಕೋಳಿಬೈಲು.
ಮಡಿಕೇರಿ
(ಅಭಿಪ್ರಾಯ ಲೇಖಕರದ್ದು)

Leave a Comment

Your email address will not be published. Required fields are marked *