ಸಮಗ್ರ ನ್ಯೂಸ್: ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ ಕಾಡುಪ್ರಾಣಿಗಳಾದ ಚಿರತೆ, ಹುಲಿ, ಆನೆಗಳು ಕಾಡಾಂಚಿನ ಗ್ರಾಮಗಳಿಗೆ ಬಂದು ಬೆಳೆ ನಾಶ ಮಾಡುವುದು, ಕುರಿ ಕೋಳಿಗಳನ್ನು ಹೊತ್ತೊಯ್ಯುವುದು ಸಾಮಾನ್ಯ ಎನಿಸಿದೆ. ಈ ಮಧ್ಯೆ ಅಸ್ಸಾಂನಲ್ಲಿ ಚಿರತೆಯೊಂದು ದಾರಿಯಲ್ಲಿ ಸಾಗುತ್ತಿದ್ದ ಸೈಕಲ್ ಸವಾರನ ಮೇಲೆರಗಿದ್ದು, ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಘಟನೆ ನಡೆದಿದೆ.
ಸೈಕಲ್ ಸವಾರ ತನ್ನ ಪಾಡಿಗೆ ತಾನು ಯಾವುದೇ ಚಿಂತೆಯಿಲ್ಲದೇ ಹಾಯಾಗಿ ಸೈಕಲ್ ತುಳಿಯುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುತ್ತಾನೆ. ಅಷ್ಟರಲ್ಲಿ ಸಮೀಪದ ಕಾಡಿನಿಂದ ಧುತ್ತನೇ ಚಿರತೆಯೊಂದು ಬಂದು ಆತನ ಮೇಲೆರಗಿದೆ. ನಿರೀಕ್ಷಿಸದೇ ಬಂದ ಅಚಾನಕ್ ದಾಳಿಯಿಂದ ಆಘಾತಕ್ಕೊಳಗಾದ ಆತ ಒಮ್ಮೆಲೆ ಸೈಕಲ್ ಸಮೇತ ಕೆಳಗೆ ಬೀಳುತ್ತಾನೆ. ಅಷ್ಟರಲ್ಲಿ ಈತನ ಹಿಂದೆಯೇ ಕೆಂಪು ಬಣ್ಣದ ಕಾರು ಬಂದಿದ್ದು, ಕಾರನ್ನು ನೋಡಿದ ಚಿರತೆ ಈತನನ್ನು ಬಿಟ್ಟೋಡಿದೆ. ಆದರೆ ಸೈಕಲ್ ಸವಾರ ಮಾತ್ರ ಒಮ್ಮೆಲೇ ಎದುರಾದ ಈ ದಾಳಿಯಿಂದ ಸಂಪೂರ್ಣ ಆಘಾತಕ್ಕೊಳಗಾಗಿದ್ದ.
ಈ ಘಟನೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲ್ದಿಬರಿ ಅನಿಮಲ್ ಕಾರಿಡಾರ್‌ನಲ್ಲಿ ಜನವರಿ 19 ರಂದು ನಡೆದಿದ್ದು, ಈಗ ವೈರಲ್ ಆಗುತ್ತಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರಾಧಿಕಾರವು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಆದರೆ, ದಾಳಿಯಲ್ಲಿ ಸೈಕ್ಲಿಸ್ಟ್‌ಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ.