ಅಧಿಕಾರಿಗಳ ನಿರ್ಲಕ್ಷ್ಯ, ಅಂಬೇಡ್ಕರ್ ರಕ್ಷಣಾ ವೇದಿಕೆ ಹೋರಾಟದ ಎಚ್ಚರಿಕೆ
ಆಲೆಟ್ಟಿ ಗ್ರಾಮದ ಬಡ ದಲಿತ ಮಹಿಯೊಬ್ಬರು ಸರಕಾರದ ಸವಲತ್ತಿಗಾಗಿ ಅಲೆದಾಡಿದಾಡಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿಯೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲೆಟ್ಟಿ ಗ್ರಾಮದ ಮೊರಂಗಲ್ಲು ದಲಿತ ಮಹಿಳೆ ಭಾಗೀರಥಿ ಎಂಬವರು ಸುಮಾರು 40 ವರ್ಷಗಳಿಂದ ಸರ್ವೇ ನಂಬರ್ 121 ರಲ್ಲಿ ಸಣ್ಣದೊಂದು ಮನೆಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಈ ಜಾಗಕ್ಕೆ 94ಸಿಗೆ ಅರ್ಜಿ ಕೊಟ್ಟು ಹಲವು ವರ್ಷಗಳಾದರೂ ಅವರಿಗೆ ಇದುವರೆಗೂ ಹಕ್ಕು ಸಿಕ್ಕಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಗೆ ಮತ್ತು ತಹಸೀಲ್ದಾರರಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗದೇ ಈಗ ಮನೆ ಬೀಳುವ ಪರಿಸ್ಥಿತಿ ತಲುಪಿದೆ. ಇತ್ತೀಚೆಗೆ ಗ್ರಾಮ ವಾಸ್ತವಕ್ಕೆ ಬಂದಿದ್ದ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಬಡ ಮಹಿಳೆ.
ಈ ಬಗ್ಗೆ ಅವರು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆಯವರು ಸ್ಥಳಕ್ಕೆ ಭೇಟಿ ಮಾಡಿ ಮೇಲಾಧಿಕಾರಿಯವರಿಗೆ ಸಂಘಟನೆ ಮುಖಾಂತರ ದೂರು ನೀಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಮಹಿಳೆಗೆ 94ಸಿ ಹಕ್ಕುಪತ್ರ ನೀಡದಿದ್ದರೇ ಹೋರಾಟ ನಡೆಸುತ್ತೇವೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ತಿಳಿಸಿದ್ದಾರೆ.