ಸಮಗ್ರ ನ್ಯೂಸ್: ಚಲಿಸುತ್ತಿದ್ದ ಬಸ್ ಮೇಲೆ ಮರವೊಂದು ಉರುಳಿಬಿದ್ದ ಘಟನೆ ಗುಂಡ್ಯ – ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಅನಿಲ ಬಳಿ ನಡೆದಿದೆ.
ಅದೃಷ್ಟವಶಾತ್ ಸಂಭಾವ್ಯ ಅಪಾಯ ತಪ್ಪಿದ್ದು, ಪ್ರಯಾಣಿಕರು ಬಚಾವಾಗಿದ್ದಾರೆ. ಈ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗಾಳಿ ಕಾರಣದಿಂದ ಈ ಘಟನೆ ಸಂಭವಿಸಿದೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸದ ಅರಣ್ಯ ಇಲಾಖೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಈ ರಸ್ತೆಯಲ್ಲಿ ಆಗಾಗ ರಸ್ತೆ ಬದಿಯ ಮರಗಳು ಬೀಳುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳಲಿಲ್ಲ, ಈಗಾಗಲೇ ಅಪಾಯಕಾರಿ ಮರಗಳೆಂದು ಗುರುತಿಸಿದ್ದರೂ ಅಂತಹ ಮರಗಳನ್ನು ತೆರವುಗೊಳಿಸಲು ಕಾನೂನಿನ ಕುಂಟು ನೆಪ ಹೇಳುತ್ತಿರುವ ಅರಣ್ಯ ಇಲಾಖಾ ಅಧಿಕಾರಿಗಳು ಅಪಾಯ ಸಂಭವಿಸಿದಾಗ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾತ್ರ ಮಾಡುತ್ತಾರೆ.
ಇನ್ನಾದರೂ ರಸ್ತೆ ಬದಿಯ ಮರ ತೆರವುಗೊಳಿಸುವಲ್ಲಿ ಅರಣ್ಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.