ಸಮಗ್ರ ನ್ಯೂಸ್: ಅನುದಾನಿತ ವಿದ್ಯಾಸಂಸ್ಥೆಗೆ ಸರ್ಕಾರದಿಂದ ಬಂದ ಬೆಳ್ತಿಗೆ ಅಕ್ಕಿಯನ್ನು ಕುಚ್ಚಲಕ್ಕಿ ಜೊತೆ ಬದಲಾವಣೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅಕ್ಷರ ದಾಸೋಹ ಅಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೂ. 8 ರಂದು ಬಿ.ಇ.ಒ. ಎಸ್.ಪಿ.ಮಹಾದೇವ್ ಹಾಗೂ ಅಕ್ಷರ ದಾಸೋಹ ಅಧಿಕಾರಿ ಶ್ರೀಮತಿ ವೀಣಾರವರು ಶಾಲೆಗೆ ಬಂದು ಅಕ್ಕಿ ದಾಸ್ತಾನು ಪರಿಶೀಲಿಸಿ ಸರಿಯಿದೆಯೆಂದು ಮನವರಿಕೆ ಮಾಡಿಕೊಂಡು ಹೋದರೆಂದು ತಿಳಿದು ಬಂದಿದೆ. ಬೆಳ್ತಿಗೆ ಅಕ್ಕಿಯ ಅನ್ನ ಶಾಲಾ ಮಕ್ಕಳು ಊಟ ಮಾಡಲು ಕಷ್ಟವಾಗುವ ಕಾರಣ ಅದನ್ನು ಕುಚ್ಲಕ್ಕಿಯೊಂದಿಗೆ ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸಿದ್ದೆವು ಎಂದು ಶಾಲಾ ಮುಖ್ಯೋಪಾಧ್ಯಾಯರು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದಿಂದ ಅಕ್ಷರದಾಸೋಹಕ್ಕೆ ಉತ್ತಮ ದರ್ಜೆಯ ಬೆಳ್ತಿಗೆ ಅಕ್ಕಿ ನಮ್ಮ ಶಾಲೆಗೆ ಪೂರೈಕೆಯಾಗುತ್ತಿದೆ. ಆದರೆ ಕರಾವಳಿ ಜಿಲ್ಲೆಯ ಜನರಿಗೆ ಪ್ರತಿನಿತ್ಯ ಬೆಳ್ತಿಗೆ ಅಕ್ಕಿಯ ಊಟ ಇಲ್ಲಿ ಆರೋಗ್ಯಕ್ಕೆ ಸ್ವಲ್ಪ ಕಷ್ಟ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಮ್ಮ ಶಾಲೆಯ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸ್ಥಳೀಯ ಸಂಸ್ಥೆಯಲ್ಲಿ ಇರುವ ಕುಚ್ಲಕ್ಕಿಯೊಂದಿಗೆ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿರುವುದು ಸತ್ಯ. ನಮ್ಮೊಳಗಿನ ಭಿನ್ನಾಭಿಪ್ರಾಯಗಳು ಏನಿದ್ದರೂ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ಸಂಸ್ಥೆಯ ಹಿತಕ್ಕೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ತಿಳಿಸಿದ್ದಾರೆ.
ವಿವೇಕಾನಂದ ವಿದ್ಯಾಸಂಸ್ಥೆಗೆ ಸರಕಾರದಿಂದ ಬಂದ ಅಕ್ಷರದಾಸೋಹದ ಅಕ್ಕಿಯನ್ನು ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಡ್ಕಾರು ಶಾಖೆಗೆ ಬದಲಾವಣೆ ಮಾಡಲಾಗಿತ್ತು. ಸ್ಥಳೀಯರು ವಿನೋಬನಗರದ ಭೋಜಪ್ಪ ನಾಯ್ಕ್ ರಿಗೆ ತಿಳಿಸಿದ ಮೇರೆಗೆ ಅವರು ಬಂದು ಪ್ರಶ್ನಿಸಿ ಚರ್ಚೆ ನಡೆಸಿದ್ದರಿಂದ ಅಕ್ಕಿಯನ್ನು ವಾಪಸ್ ಕೊಂಡೊಯ್ದಿದ್ದರು.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ನಡೆದ ಶಾಲಾ ಆಡಳಿತ ಮಂಡಳಿ ಸಭೆಯಲ್ಲಿಯೂ ಈ ವಿಚಾರ ಚರ್ಚಿಸಲ್ಪಟ್ಟಿತು.