ಸಮಗ್ರ ನ್ಯೂಸ್: ಕೆಲವು ಯುವಕರು ವಿದ್ಯುತ್ ಕಂಬಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾಕುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ತಮಿಳುನಾಡಿನ ಚಿತ್ರ ಎಂದು ಪ್ರತಿಪಾದಿಸಿ ಹಂಚಲಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಹೆಜ್ಜೆಗುರುತು ಮೂಡಿಸುತ್ತಿದೆ ಎಂಬರ್ಥದ ಹಲವಾರು ಪೋಸ್ಟ್ ಗಳು ಈ ಚಿತ್ರದೊಂದಿಗೆ ವೈರಲ್ ಆಗಿತ್ತು. ಆದರೆ, ಇದು ತಮಿಳುನಾಡಿನ ಚಿತ್ರ ಅಲ್ಲ ಎಂದು Altnews.in ವರದಿ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಈ ಚಿತ್ರವನ್ನು ಟ್ವೀಟ್ ಮಾಡಿ ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಬಿಜೆಪಿ ಹಿಮಾಚಲ ವಕ್ತಾರ ಪ್ರಜ್ವಲ್ ಬಸ್ತಾ ಕೂಡ ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ತಮಿಳುನಾಡು ಕೇಸರಿಮಯವಾಗುವತ್ತ ಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವೂ ಅದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಕೂಡಾ ವೈರಲ್ ಆಗಿದೆ.
ವೈರಲ್ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಇದು ಎಡಿಟ್ ಮಾಡಿದ ಚಿತ್ರ ಎಂದು ಹೇಳಿದ್ದಾರೆ. ಮೂಲ ಚಿತ್ರವು BSP ಧ್ವಜವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ altnews ಇದರ ಸತ್ಯ ಪರಿಶೀಲನೆ ಮಾಡಿದ್ದು, ಇದರ ಮೂಲ ಚಿತ್ರವು ತೆಲಂಗಾಣದ ಬಿಎಸ್‌ಪಿ ನಾಯಕಿ ಶಿರಿಶಾ ಸ್ವೆರೋ ಅಕಿನಪಲ್ಲಿ ಅವರ ಟ್ವೀಟ್ ನಲ್ಲಿ ಕಂಡುಬಂದಿದೆ.