ಸಮಗ್ರ ನ್ಯೂಸ್: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ 2 ಕೋಟಿ ರೂ. ಹಣವನ್ನು ರೈಲ್ವೆ ಪೊಲೀಸರು ಕಾರವಾರ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಲಾಗಿದೆ.
ರೈಲು ಸಂಖ್ಯೆ.12133 (CSMT-ಮಂಗಳೂರು ಜೆಎನ್‌ಎಕ್ಸ್‌ಪ್ರೆಸ್) ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ ಎರಡು ಕೋಟಿ ರೂ.ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರಾಜಸ್ಥಾನದ ಚೆನ್ ಸಿಂಗ್ ಯಾನೆ ಮನೋಹರ್ ಹೇಮ ಸಿಂಗ್ ( 22 ವರ್ಷ) ಎಂದು ಗುರುತಿಸಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬರು ಬ್ಯಾಗ್ ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದಾರೆಂದು ಬೇಲಾಪುರದಿಂದ ರೈಲ್ವೆ ಅಧಿಕಾರಿ ಹೆಚ್.ಕೆ.ಪ್ರಸನ್ನ ಕುಮಾರ್ ಲಿಖಿತ ಮಾಹಿತಿಯನ್ನು ಕಾರವಾರ ರೈಲ್ವೆ ಪೊಲೀಸರಿಗೆ ಸುಳಿವು ನೀಡಿದರು. ಈ ವ್ಯಕ್ತಿ ರೈಲ್ವೆ ಟಿಸಿ ಗಳಿಗೆ ಮಾಹಿತಿ ನೀಡಲು ಹಾಗೂ ಟಿಕೆಟ್ ತೋರಿಸಲು ನಿರಾಕರಿಸಿದ್ದ.
ಇದನ್ನು ಆಧರಿಸಿ ರೈಲ್ವೆ ಪೊಲೀಸರು ಕಾರವಾರ ನಿಲ್ದಾಣದಲ್ಲಿ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಿದರು. ಆದರೆ ಆರಂಭದಲ್ಲಿ ಆರೋಪಿ ಚೆನ್ ಸಿಂಗ್ ತನ್ನ ಬ್ಯಾಗ್ ತೆರೆಯಲು ನಿರಾಕರಿಸಿದ್ದ. ವಿಚಾರಣೆ ಚೆನ್ ಸಿಂಗ್ ಬ್ಯಾಗ್‌ನಲ್ಲಿ ಕೆಲವು ನಗದು (ಭಾರತೀಯ ಕರೆನ್ಸಿ ನೋಟುಗಳು) ಇರುವುದನ್ನು ಒಪ್ಪಿಕೊಂಡ. ಬ್ಯಾಗ್‌ನಲ್ಲಿ ಕಂದು ಬಣ್ಣದ ಸೆಲ್ಲೋ ಟೇಪ್ ನಿಂದ ಸುತ್ತಿದ ಪ್ಯಾಕ್‌ನಲ್ಲಿ ಭಾರತೀಯ ಕರೆನ್ಸಿ ನೋಟುಗಳನ್ನು ಹೊಂದಿದ್ದು, ಒಟ್ಟು 2 ಕೋಟಿ ರೂಪಾಯಿಗಳು ಅದರಲ್ಲಿತ್ತು.
ವ್ಯಕ್ತಿಯೊಬ್ಬರ ನಿರ್ದೇಶನದ ಮೇರೆಗೆ ಹಣ ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾನೆ. “ಮುಂಬೈನ ಭಾರತ್ ಭಾಯ್ ಎಂಬವರ ಬಳಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15000 ರೂ ಪ್ರೋತ್ಸಾಹಕ ಸಂಬಳ ಪಡೆಯುತ್ತೇನೆ. ಈ ಹಣವನ್ನು ಮಂಗಳೂರಿನಲ್ಲಿರುವ ರಾಜು ಎಂಬುವವರಿಗೆ ತಲುಪಿಸಲು ಹೋಗುತ್ತಿದ್ದೆ” ಎಂದಿದ್ದಾನೆ