ಸಮಗ್ರ ನ್ಯೂಸ್: ಕೋಮು ಸಾಮರಸ್ಯ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ. ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದೆ. ಅದರಲ್ಲಿ ಹಿಂದೂಯೇತರರನ್ನು ಜಾತ್ರೆಗಳಲ್ಲಿ ನಿರ್ಬಂಧಿಸಿದ್ದು ಕೂಡ ಒಂದು.
ಇದೀಗ ಅದೆಲ್ಲವೂ ತಣ್ಣಗಾಗಿರುವ ನಡುವೆ ಮತ್ತೆ ದಕ್ಷಿಣ ಕನ್ನಡದ ಪ್ರಖ್ಯಾತ ದೇವಸ್ಥಾನ ಸೌತಡ್ಕ ಗಣಪತಿ ದೇವಾಲಯದಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಕಳೆದ ವಾರ ಇಲ್ಲಿನ ಮುಸ್ಲಿಂ ಯುವಕನೋರ್ವ ಹಿಂದೂ ಭಕ್ತೆಯನ್ನು ವಿವಾಹವಾಗಿದ್ದು, ಈ ಕಾರಣದಿಂದ ದೇವಸ್ಥಾನಕ್ಕೆ ಹಿಂದೂಯೇತರ ವಾಹನಗಳಿಗೆ ಸಂಘಟನೆಗಳು ನಿರ್ಬಂಧ ವಿಧಿಸಿವೆ.
ದೇವಸ್ಥಾನದ ಮುಂಭಾಗವೇ ಈ ಸಂಬಂಧ ಬ್ಯಾನರ್ ಹಾಕಿದ್ದಾರೆ. ಹಿಂದೂಯೇತರ ಅನ್ಯಕೋಮಿನ ಆಟೋ, ಟ್ತಾಕ್ಸಿ ಸೇರಿದಂತೆ ಇತರೆ ವಾಹನಗಳಿಗೆ ನಿರ್ಬಂಧಿಸಲಾಗಿದೆ ಎಂದು ಬರೆದಿದ್ದಾರೆ. ಹಿಂದೂಗಳ ಶ್ರದ್ಧಾ ಕೇಂದ್ರವಾದ ಸೌತಡ್ಕದಲ್ಲಿ ಅನ್ಯಕೋಮಿನವರು ಪ್ರವೇಶ ಮಾಡಿ ಭಕ್ತಾಧಿಗಳನ್ನು ಲವ್ ಜಿಹಾದ್ ಮತ್ತು ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವಿದರಿಂದ ಹಿಂದೂಯೇತರ ಆಟೋ, ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ತವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬ್ಯಾನರ್ ನಲ್ಲಿ ಮುದ್ರಿಸಲಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿ ಮುಸ್ಲಿಂ ಯುವಕನೊಬ್ಬ ಲವ್ ಜಿಹಾದ್ ಎಸಗಿದ್ದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಭಜರಂಗದಳದ ಹೆಸರಿನಲ್ಲಿ ಈ ಫಲಕ ಹಾಕಿದ್ದಾರೆ. ಸೌತಡ್ಕ ಗಣಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆಡಳಿತ ಮಂಡಳಿ ಫಲಕ ಹಾಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಿನ್ನಲೆ ಏನು? : ಕೊಕ್ಕಡದಲ್ಲಿ ಆಟೋ ಚಾಲಕನಾಗಿದ್ದ ಮಲ್ಲಿಗೆ ಮಜಲಿನ ಮುಸ್ಲಿಂ ಯುವಕ ಸಮೀರ್(27) ಎಂಬಾತ ಬೆಂಗಳೂರಿನ ಹಿಂದೂ ಯುವತಿ ಬಸಮ್ಮ ರಕ್ಕಸಗಿ(22) ಎಂಬಾಕೆಯನ್ನು ಪರಿಚಯಿಸಿಕೊಂಡು, ಫೋನ್ ನಂಬರ್ ಪಡೆದು ಪ್ರೀತಿಯ ಬಲೆಗೆ ಬೀಳಿಸಿದ್ದನು. ಇವರಿಬ್ಬರು ಮೇ ತಿಂಗಳಿನಲ್ಲಿ ರಿಜಿಸ್ಟ್ರಾರ್ ಮದುವೆಯಾದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದೊಂದು ಲವ್ ಜಿಹಾದ್ ಷಡ್ಯಂತ್ರ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಕೊಕ್ಕಡದ ಮುಸ್ಲಿಂ ಆಟೋ ಚಾಲಕರು ಪ್ರವಾಸಿ ಭಕ್ತರ ಬಳಿ, ಅದರಲ್ಲೂ ಮಹಿಳೆಯರು-ಯುವತಿಯರ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದರು ಎಂದು ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಕ್ಕಡದಲ್ಲಿ ಕೋಮು ಘರ್ಷಣೆ ಕೂಡ ನಡೆದಿತ್ತು.