ಸಮಗ್ರ ನ್ಯೂಸ್: ಸಾಧನೆ ಮಾಡುವ ಛಲವೊಂದಿದ್ದರೆ ಸಾಕು ಯಾವುದೇ ಸಮಸ್ಯೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಮೈಸೂರು ಜಿಲ್ಲೆಯ ಯುವತಿಯೊಬ್ಬರು ಸಾಕ್ಷಿಯಾಗಿದ್ದಾರೆ.
10ನೇ ತರಗತಿಯಲ್ಲೇ ಶೇ.70 ರಷ್ಟು ದೃಷ್ಟಿ ಕಳೆದುಕೊಂಡರೂ ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿನಲ್ಲಿ ಟಾಪ್ ರ‍್ಯಾಂಕ್ ಪಡೆಯುವ ಮೂಲಕ ಸಾಂಸ್ಕೃತಿಕ ನಗರಿಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಯುವತಿ ಕೆ.ಟಿ.ಮೇಘನಾ ಯುಪಿಎಸ್‌ಯಲ್ಲಿ 425ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಕುಡುಕೂರಿನ ತಾಂಡವಮೂರ್ತಿ ಹಾಗೂ ನವನೀತ ದಂಪತಿಯ ಪುತ್ರಿ ಮೇಘನಾ ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸಿಸುತ್ತಿದ್ದಾರೆ. 10ನೇ ತರಗತಿಯಲ್ಲಿದ್ದಾಗ ರೆಟಿನಾ ಸಮಸ್ಯೆಯಿಂದಾಗಿ ಶೇ.70 ರಷ್ಟು ದೃಷ್ಟಿಯನ್ನು ಕಳೆದುಕೊಳ್ಳಬೇಕಾಯಿತು. ಆದರೂ ಅದನ್ನು ವೈಫಲ್ಯವೆಂದು ಭಾವಿಸದೇ ತನ್ನ ಗುರಿಯತ್ತ ಮುಂದುವರಿದ ಮೇಘನಾ ಇದೀಗ ಯುಪಿಎಸ್‌ಸಿಯಲ್ಲಿ ಟಾಪ್ ರ‍್ಯಾಂಕರ್ ಗರಿ ಪಡೆದಿದ್ದಾರೆ.
ಮೇಘನಾ 2020ರಲ್ಲೂ ಯುಪಿಎಸ್‌ಸಿಯಲ್ಲಿ 465ನೇ ರ‍್ಯಾಂಕ್ ಪಡೆದಿದ್ದರು. 2015 ರಲ್ಲಿ ಕೆಎಎಸ್ ನಲ್ಲಿ 11ನೇ ರ‍್ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಖಜಾನೆ ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ.