ಸಮಗ್ರ ನ್ಯೂಸ್: ನಗರದ ಉರ್ವಾ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಗರದ ಬಲ್ಮಠದಲ್ಲಿರುವ ಖಾಸಗಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಮುಹಮ್ಮದ್ ಅಫ್ರೀಶ್, ಸುನೈಫ್, ಶೇಖ್ ಮೊಹಿದ್ದೀನ್, ಇಬ್ರಾಹೀಂ ರಾಝಿ, ಮುಹಮ್ಮದ್ ಸಿನಾನ್ ಅಬ್ದುಲ್ಲಾ, ಮುಹ್ಮಮದ್ ಅಶಾಮ್, ಮುಹಮ್ಮದ್ ಅಫಾಮ್ ಅಸ್ಲಮ್, ಮುಹಮ್ಮದ್ ಸೈಯದ್ ಅಫ್ರೀದ್ ಬಂಧಿತ ಆರೋಪಿಗಳಾಗಿದ್ದಾರೆ.
ಕೇರಳದ ಮಲಪ್ಪುರಂ ನಿವಾಸಿ ಹಾಗೂ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಬಾಬ್ ಕೆ. ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ಕಳೆದ ಶನಿವಾರ ಸಂಜೆ ಕಾಲೇಜು ಸಮೀಪದ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಬಾಬ್ ಭಾಗವಹಿಸಿದ್ದರು. ಈ ಸಂದರ್ಭ ಪರಸ್ಪರ ಕೈಕಾಲು ತಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವಿಚಾರವಾಗಿ ಸಭಾಂಗಣದ ಹೊರಗಡೆ ಬಂದ ಬಳಿಕ 12 ಮಂದಿ ಸೀನಿಯರ್ ವಿದ್ಯಾರ್ಥಿಗಳು ಐದಾರು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿದ್ದಾರೆ.
ಬಳಿಕ ಆರೋಪಿಯ 12 ವಿದ್ಯಾರ್ಥಿಗಳು ಶಬಾಬ್ ಮತ್ತು ಆತನ ಸ್ನೇಹಿತರು ವಾಸ್ತವ್ಯವಿರುವ ಚಿಲಿಂಬಿಯ ಖಾಸಗಿ ಅಪಾರ್ಟ್‌ಮೆಂಟ್ ಗೆ ನುಗ್ಗಿ ಮತ್ತೆ ಆ ವಿದ್ಯಾರ್ಥಿಗಳನ್ನು ವಿಕೆಟ್, ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಐದಾರು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ದೂರುದಾರ ವಿದ್ಯಾರ್ಥಿಗಳು ಆರೋಪಿತರ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 12 ಮಂದಿಯಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳು ನಶೆಯಲ್ಲಿದ್ದರೆಂಬ ಆರೋಪವೂ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗಿದೆ. ಹಲ್ಲೆ ಕೃತ್ಯಕ್ಕೆ ಸ್ಪಷ್ಟ ಕಾರಣ ಏನು? ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.