ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನಗರದ ಹೊರವಲಯದಲ್ಲಿನ ಕೊಡಿಯಾಲಬೈಲು ದಲಿತರ ಕಾಲೋನಿ ಅಭಿವೃದ್ಧಿಯ ಅನುದಾನ ದಡಿಯಲ್ಲಿ ಮಂಜೂರಾದ ಶೌಚಾಲಯ ಮತ್ತು ಸ್ನಾನ ಗೃಹದ ಕಟ್ಟಡವನ್ನು ಬೇರೆಡೆ ನಿರ್ಮಿಸಿ ದಲಿತ ಸಮುದಾಯದವರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಸಂಬಂಧಪಟ್ಟ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ದೂರು ನೀಡಲಾಗಿದೆ.
ದೂರಿನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ದಲಿತ ಕಾಲೋನಿ ಅಭಿವೃದ್ಧಿಗೆ ಬಂದಂತಹ ಅನುದಾನವನ್ನು ದಲಿತ ಕಾಲೋನಿಯಲ್ಲಿ ಅದರ ಫಲಾನುಭವಿಗಳಿಗೆ ನೀಡದೆ ಸ್ಥಳೀಯವಾಗಿರುವ ಹಿಂದೂ ರುದ್ರಭೂಮಿ ಯ ವಠಾರದೊಳಗೆ ನಿರ್ಮಿಸಿ ಅನುದಾನವನ್ನು ದುರ್ಬಳಕೆ ಗೊಳಿಸಲಾಗಿದೆ.
ಈ ರೀತಿಯ ಅನುದಾನಗಳನ್ನು ಬೇರೆಡೆಗೆ ಕೊಂಡೊಯ್ದು ಮಾಡುವುದು ತಪ್ಪು ಎಂದು ತಿಳಿದಿದ್ದರೂ ಕೂಡ ನಿಯಮಗಳನ್ನು ಗಾಳಿಗೆ ತೂರಿ ಅನ್ಯಾಯವೆಸಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಜನಪ್ರತಿನಿಧಿಗಳ, ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅವರ ವಿರುದ್ಧ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅದೇ ರೀತಿ 30 ಲಕ್ಷ ರೂಪಾಯಿಯ ವೆಚ್ಚದ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನ ಗೃಹವನ್ನು ಕೊಡಿಯಾಲ ಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಿಕೊಡುವಂತೆ ಆಗ್ರಹಿಸಿ ದ್ದಾರೆ. ತಪ್ಪಿದ್ದಲ್ಲಿ ಸುಳ್ಯ ತಾಲ್ಲೂಕು ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಈ ಒಂದು ಘಟನೆ ಯಾರೋದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ಗಾದೆ ಮಾತಿನಂತೆ ಆಗಿದೆ. ಈ ಪ್ರಕರಣದಲ್ಲಿ ಸ್ಥಳೀಯ ಜನ ಪ್ರತಿನಿಧಿ ಸೇರಿದಂತೆ ಕೆಲವು ಅಧಿಕಾರಿಗಳು ಕೂಡ ಶಾಮೀಲು ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.