ಸಮಗ್ರ ನ್ಯೂಸ್: ಕೆಲ ತಿಂಗಳ ಹಿಂದೆ ಕರಾವಳಿ ಹೊತ್ತಿಕೊಂಡ ಹಿಜಾಬ್ ದಂಗಲ್ ರಾಜ್ಯಾದ್ಯಂತ ಧಗಧಗಿಸಿತ್ತು. ಕೋರ್ಟ್ ಆದೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕೇಸ್ ಈಗ ಮತ್ತೆ ಉರಿಯಲು ಆರಂಭಿಸಿದೆ. ಮತ್ತದೇ ಕರಾವಳಿಯಲ್ಲಿ ಹಿಜಾಬ್ ವಿವಾದ ಶುರುವಾಗಿದೆ. ಮೇ 10ರಂದು ಮಂಗಳೂರಿನ ವಿವಿ ಘಟಕ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಪೋಷಕರ ಸಭೆಯಲ್ಲಿ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಲಾಗಿತ್ತಾದರೂ, ಕಾಲೇಜು ಆಡಳಿತ ಮಂಡಳಿ ಯಾವುದೇ ಆದೇಶ ಜಾರಿ ಮಾಡಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಹಿಂದೂ ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದರು. ಇದಾದ ಬಳಿಕ ಅನೇಕ ಬೆಳವಣಿಗೆಗಳಾಗಿದ್ದು ಸದ್ಯ ಈ ಬಗ್ಗೆ ಸಭೆಗಳು, ಚರ್ಚೆಗಳು ನಡೆಯುತ್ತಿವೆ.
ಇನ್ನು ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಸೇರಿಸುವುದಿಲ್ಲ ಎಂದು ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಹಲವು ಪಕ್ಷಗಳ ಕೈವಾಡ ಇದೆ. ಎಸ್ಡಿಪಿಐ, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳ ಕೈವಾಡ ಇದೆ. ಹಿಜಾಬ್ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ಯತ್ನ ನಡೆಯುತ್ತಿದೆ. ಕಾನೂನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಹೇಳಿದ್ದಾರೆ.
ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್ನಲ್ಲೂ ಹಿಜಾಬ್ಗೆ ಅವಕಾಶವಿಲ್ಲ ಎಂದು ಮಂಗಳೂರು ವಿವಿ ಪ್ರಾಂಶುಪಾಲೆ ಅನುಸೂಯ ರೈ ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ 44 ಜನ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶದ ಬಗ್ಗೆ ಸಮಸ್ಯೆ ಇದೆ. ಅವರನ್ನು ಅವರ ಪೋಷಕರ ಮನವೊಲಿಸಲು ನಮಗೆ ಸಮಯ ಬೇಕು. ಅವರು ನ್ಯಾಯಾಲಯದ ಆದೇಶ ಆಡಳಿತ ಮಂಡಳಿಯಿಂದ ನಿಯಮವನ್ನು ಪಾಲಿಸಲೇ ಬೇಕು. ಆಡಳಿತ ಮಂಡಳಿ ಆದೇಶ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಅನೇಕ ಶಾಸಕರು ಕರೆ ಮಾಡಿದ್ದಾರೆ ನನಗೆ ಯಾರು ಒತ್ತಡ ಹಾಕಿಲ್ಲ. ಕೇವಲ ನಮ್ಮ ಆದೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಅನುಸೂಯ ರೈ ತಿಳಿಸಿದ್ದಾರೆ.