ಸಮಗ್ರ ನ್ಯೂಸ್: ಜಗತ್ತೇ ಎದುರಾದರೂ ಜನ್ಮ ಕೊಟ್ಟವರು ಮಾತ್ರ ನಮ್ಮ ಕೈ ಬಿಡಲ್ಲ. ಕಷ್ಟವೋ ಸುಖವೋ ಮಕ್ಕಳು ಚೆನ್ನಾಗಿರಲಿ ಅಂತ ತಮ್ಮ ಇಡೀ ಜೀವನ ಮುಡಿಪಾಗಿಡ್ತಾರೆ. ಆದ್ರೆ ಮಂಡ್ಯದಲ್ಲಿ ಮಗುವಿಗೆ ಖಾಯಿಲೆ ಇದೆ ಎಂಬ ಕಾರಣಕ್ಕೆ ಚರ್ಚ್‌ನಲ್ಲಿ ಮಗು ಬಿಟ್ಟು ಪೋಷಕರು ಪರಾರಿಯಾಗಿದ್ದಾರೆ.
ಹೆತ್ತವರ ಪ್ರೀತಿಯಿಂದ ವಂಚಿತವಾದ ಮಗು ಈಗ ಅನಾಥವಾಗಿದೆ. ಕಲ್ಲು ಹೃದಯದ ಪೋಷಕರು ಮಾಡಿದ ತಪ್ಪಿಗೆ 8-9 ತಿಂಗಳ ಗಂಡು ಮಗು ಅನಾಥವಾಗಿದೆ. ಅನಾರೋಗ್ಯ ಪೀಡಿತ ಮಗು ಎಂಬ ಕಾರಣಕ್ಕೆ ಜನ್ಮ ನೀಡಿದ ತಂದೆ ತಾಯಿಯೇ ನಡುನೀರಲ್ಲಿ ಮಗು ಕೈ ಬಿಟ್ಟಿದ್ದಾರೆ. ಈ ಸಮಯದಲ್ಲಿ ಹೆತ್ತವರ ಲಾಲನೆ ಪಾಲನೆ ಜೊತೆ ಬೆಳೆಯ ಬೇಕಿದ್ದ ಮಗು ಈಗ ಅನಾಥ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಿದೆ.
ಮೇ. 26 ಗುರುವಾರ ಬೆಳಿಗ್ಗೆ 6:30ರ ಸಮಯಕ್ಕೆ ಮಂಡ್ಯದ ಫ್ಯಾಕ್ಟರಿ ಸರ್ಕಲ್‌ನಲ್ಲಿರುವ ಚರ್ಚ್‌ಗೆ ವ್ಯಕ್ತಿಯೊಬ್ಬ ಮಗುವಿನೊಂದಿಗೆ ಬಂದಿದ್ದಾನೆ. ಚರ್ಚ್ ಹೊರಭಾಗದಲ್ಲಿ ಮಹಿಳೆಯೊಬ್ಬಳನ್ನ ನಿಲ್ಲಿಸಿ ಮಗು ಜೊತೆಗೆ ಪ್ರಾರ್ಥನಾ ಸ್ಥಳಕ್ಕೆ ಬಂದ ಆತ ಅಲ್ಲಿದ್ದ ಸಿಬ್ಬಂದಿ ಸ್ಟೀಫನ್ ಎಂಬುವರನ್ನ ಫಾಧರ್ ಬಗ್ಗೆ ವಿಚಾರಿಸಿದ್ದ. ಮಗುವಿಗೆ ಅನಾರೋಗ್ಯ ಹಾಗಾಗಿ ಫಾದರ್ ಬಳಿ ಆಶೀರ್ವಾದ ಪಡೆಯಬೇಕಿದೆ ಎಂದಿದ್ದ. ಕೆಲಹೊತ್ತಿನಲ್ಲಿ ಫಾಧರ್ ಬರುವುದಾಗಿ ಚರ್ಚ್ ಸಿಬ್ಬಂದಿ ಹೇಳಿದರು. ಈ ವೇಳೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಮಗು ಬಿಟ್ಟು ಹೋದ ವ್ಯಕ್ತಿ ನಾಪತ್ತೆಯಾಗಿದ್ದ. ಬಳಿಕ ಸೆಕ್ಯುರಿಟಿ ಗಾರ್ಡ್ ವಿಚಾರಿಸಿದ ಸಿಬ್ಬಂದಿಗೆ ಅವರ ಸುಳಿವು ಪತ್ತೆ ಆಗಲಿಲ್ಲ. ಅಕ್ಕ ಪಕ್ಕದ ರಸ್ತೆಗಳಲ್ಲಿ ಹುಡುಕಿದರೂ
ಪೋಷಕರ ಸುಳಿವು ಸಿಗದೆ ಇದ್ದಾಗ ಚರ್ಚ್ ಫಾದರ್ ಗಮನಕ್ಕೆ ತಂದಿದ್ದ ಸಿಬ್ಬಂದಿ ಅವರ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮತ್ತು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಚರ್ಚ್ ಸಮೀಪದಲ್ಲೇ ಇದ್ದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಹೆತ್ತ ಕಂದಮ್ಮನನ್ನು ಅನಾರೋಗ್ಯದ ನೆಪವೊಡ್ಡಿ ಅನಾಥ ಮಾಡಿದ ಪೋಷಕರ ಈ ಕೃತ್ಯಕ್ಕೆ ಹಿಡಿಶಾಪ ಹಾಕಲಾಗುತ್ತಿದೆ. ಏನೂ ಅರಿಯದ ಹಸುಗೂಸು ಈಗ ಅನಾಥವಾಗಿದೆ.