ಸಮಗ್ರ ನ್ಯೂಸ್: ಹೋರಾಟಗಾರರ ಗುಂಪಾದ ಕ್ಯಾಂಪೇನ್ ಎಗೇನ್‌ಸ್ಟ್ ಹೇಟ್ ಸ್ಪೀಚ್ (ಸಿಎಎಚ್‌ಎಸ್) ದ್ವೇಷ ಪ್ರಚೋದಿತ ವರದಿಗಳನ್ನು ಖಂಡಿಸಿ ಒಂದು ವರ್ಷದ ಅವಧಿಯಲ್ಲಿ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ 17 ದೂರುಗಳನ್ನು ನೀಡಿದ್ದು, ಇದರಲ್ಲಿ ಯಾವುದನ್ನೂ ಪೊಲೀಸರು ಸ್ವೀಕರಿಸಿಲ್ಲ ಎಂದು ಗುಂಪಿನ ಸದಸ್ಯರು ಹೇಳಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
ಬೆಂಗಳೂರಿನಲ್ಲಿ ವೈಯಕ್ತಿಕ ವೈಷಮ್ಯದ ಕಾರಣ ನಡೆದ ಅಪರಾಧ ಕೃತ್ಯದ ವರದಿಯನ್ನು ತಿರುಚಿದ ಸಂಬಂಧ ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ವಿರುದ್ಧ ಇತ್ತೀಚೆಗೆ ದೂರು ನೀಡಲಾಗಿದೆ. ಮೇ 9 ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ‘ದೇವಾಲಯಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲು ಯೋಜಿಸಿದ ದುಷ್ಕರ್ಮಿಗಳು ಬಂಧನಕ್ಕೊಳಗಾಗಿದ್ದಾರೆ’ ಎಂದು ಸುದ್ದಿ ಪ್ರಕಟಿಸಲಾಯಿತು. ಹಿಂದೂಗಳನ್ನು ಗುರಿಯಾಗಿಸಿ ಕೃತ್ಯ ಎಸಗಲು ಯೋಜಿಸಲಾಗಿತ್ತು ಎಂದು ಯಾವುದೇ ಅಧಿಕೃತತೆ ಇಲ್ಲದೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿದೆ ಎಂದು ಸಿಎಎಚ್‌ಎಸ್ ಆರೋಪಿಸಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಸಿ.ಎಚ್.ಪ್ರತಾಪ್ ರೆಡ್ಡಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಹಿಂದೂಗಳು ಮತ್ತು ಆರ್‌ಎಸ್‌ಎಸ್ ಮೇಲೆ ಹಲ್ಲೆ ನಡೆಸಲು ಸಂಚು ಎಂದು ಸುಳ್ಳು ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡಲಾಗಿದೆ ಎಂದು ಸಿಎಎಚ್‌ಎಸ್ ದೂರಿದೆ. ಆಜಾನ್, ಹಿಜಾಬ್ ವಿವಾದ, ಹುಬ್ಬಳ್ಳಿ, ಶಿವಮೊಗ್ಗ, ಪಾದರಾಯನಪುರ, ಕೆ.ಜಿ.ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಕೋಮು ಉದ್ವಿಗ್ನತೆಗೆ ಜೊತೆಗೆ ಈ ಅಪರಾಧ ಕೃತ್ಯವನ್ನು ನಿರೂಪಕ ವೈಯಕ್ತಿಕ ಕಾರಣಗಳಿಂದಾಗಿ ತಳುಕು ಹಾಕಿದ್ದಾನೆ ಎಂದು ತನಿಖಾಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.
“ತಮ್ಮ ಸಿದ್ಧಾಂತದ ಕಾರಣದಿಂದಾಗಿ ಅವರು ‘ಕೊಲೆಯ ಮನಸ್ಥಿತಿ’ ಹೊಂದಿದ್ದಾರೆ. ಅವರು ಉತ್ತರಪ್ರದೇಶದಲ್ಲಿ ಏನನ್ನೂ ಮಾಡಲು ಸಾಧ್ಯವಾಗದ ಕಾರಣ ಇಲ್ಲಿದ್ದಾರೆಯೇ ಎಂದು ನಿರೂಪಕ ಕೇಳುತ್ತಾನೆ. ಆತ ಸಮುದಾಯದ ಹೆಸರನ್ನು ಉಲ್ಲೇಖಿಸದಿದ್ದರೂ, ಪ್ರೇಕ್ಷಕರಿಗೆ ಇದು ಸ್ಪಷ್ಟವಾಗುತ್ತದೆ. ಆತ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿದ್ದಾನೆ. ಸಾರಾಯಿಪಾಳ್ಯದಲ್ಲಿರುವ ದೇವಸ್ಥಾನದ ಮೇಲೆ ದಾಳಿ ನಡೆಸಲು ಯೋಜಿಸಲಾಗಿದೆ ಎಂದು ಪಬ್ಲಿಕ್ ಟಿವಿ ಪ್ರತಿನಿಧಿ ಹೇಳಿದ್ದಾನೆ” ಎಂದು ಸಿಎಎಚ್‌ಎಸ್ ದೂರಿನಲ್ಲಿ ಉಲ್ಲೇಖಿಸಿದೆ.