ಸಮಗ್ರ ನ್ಯೂಸ್: ಮದುವೆ ಛತ್ರದಲ್ಲಿ ಅದ್ದೂರಿ ವಿವಾಹವೊಂದು ಕ್ಷುಲ್ಲಕ ಕಾರಣಕ್ಕೆ ಮುರಿದು ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದಿದೆ.
ಗುರು ಹಿರಿಯರು ನಿಶ್ಚಯಿಸಿದ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಮಂಗಳ ವಾಧ್ಯಗಳ ನಿನಾದ ಮೊಳಗುತಿತ್ತು. ಇನ್ನೇನು ಮದುಮಗ ವಧುವಿನ ಕೊರಳಿಗೆ ಹೂವಿನ ಹಾರ ಹಾಕಬೇಕು, ಆಮೇಲೆ ಒಂದಾಗಿ ಬಾಳುವ ವಚನದೊಂದಿಗೆ ಸಪ್ತಪದಿ ತುಳಿಯಬೇಕು. ಅಷ್ಟರಲ್ಲಿ ಸಿನಿಮೀಯ ಘಟನೆಯೊಂದು ಅಲ್ಲಿ ನಡೆದು ಬಿಟ್ಟಿತ್ತು.
ವರ ಕೈಯಲ್ಲಿ ಹಾರ ಹಿಡಿದು ಬಾಗಿ ವಧುವಿನ ಕೊರಳಿಗೆ ಹಾಕಬೇಕು, ಅಷ್ಟರಲ್ಲಿ ಜಮದಗ್ನಿಯ ರೂಪತಾಳಿದ ಮಧುವಣಗಿತ್ತಿ ಹಾರವನ್ನು ವರನ ಕೈಯಿಂದ ಎಳೆದು ನೆಲಕ್ಕೆ ಬೀಸಾಡಿದ್ದಾಳೆ. ವಧು –ವರರನ್ನು ಆಶೀರ್ವದಿಸಲು, ಅವರ ಬಾಳಿನ ಸುಮಧುರ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಆಗಮಿಸಿದ ಅತಿಥಿಗಳು ಇದನ್ನು ನೋಡಿ ಅವಾಕ್ಕಾಗಿದ್ದಾರೆ. ಹತ್ತಿರದ ನೆಂಟರಿಷ್ಟರು ಗಲಿಬಿಲಿಗೊಂಡಿದ್ದಾರೆ. ವಧು ವರರ ಪೋಷಕರು ಚಿಂತಾಕ್ರಾಂತರಾಗಿದ್ದರೆ.
ಎರಡು ಕಡೆಯವರು ವಧುವಿನ ಬಳಿ ಆಕೆಯ ರಂಪಾಟಕ್ಕೆ ಕಾರಣವನ್ನು ಕೇಳಿದ್ದು ಅವಳ ಉತ್ತರದಿಂದ ಮತ್ತಷ್ಟು ಶಾಕ್ ಆಗಿದ್ದಾರೆ. ಹಾರ ಹಾಕುವಾಗ ವರನ ಕೈ ಕೊರಳಿಗೆ ಹಾಗು ಕಿವಿಗೆ ಸ್ಪರ್ಷಿಸಿದೆ ಎಂದು ಆಕೆ ಸಂಬಂಧಿಕರ ಮುಂದೆ ತಗಾದೆ ತೆಗೆದಿದ್ದಾಳೆ. ಇದೆ ಹಾರ ಕಿತ್ತೆಸಯಲು ಕಾರಣ ಎನ್ನುವುದು ಅವಳು ನೀಡಿದ ಸಬೂಬು.
ಬಳಿಕ ಎರಡು ಕುಟುಂಬದ ಹಿರಿಯರು ಮಾತುಕತೆ ನಡೆಸಿದ್ದು ಮದುವೆ ಮುಂದುವರಿಸಲು ಒಮ್ಮತಕ್ಕೆ ಬಂದಿದ್ದಾರೆ. ಹಾಗಾಗಿ ಮತ್ತೆ ಮಂಟಪಕ್ಕೆ ವಧು ವರರು ಆಗಮಿಸಿದ್ದಾರೆ. ವರ ಇನ್ನೇನು ತಾಳಿ ಕಟ್ಟಬೇಕು ಎಂದು ಮುಂದಾದಾಗ ವಧು ಎರಡನೇ ಬಾರಿ ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ಬೇಡವೆಂದಿದ್ದಾಳೆ. ಇದರಿಂದ ವರ ಕೋಪಗೊಂಡಿದ್ದಾನೆ .
ಇದು ವಧು ವರರ ಕುಟುಂಭಿಕರ ಮಧ್ಯೆ ವಾಗ್ವಾದಕ್ಕೂ ಕಾರಣವಾಗಿದೆ. ಮಾತಿಗೆ ಮಾತು ಬೆಳೆದಿದೆ. ಇನ್ನೆನು ವಾಗ್ವಾದ ಜಗಳದ ಸ್ವರೂಪ ಪಡಕೊಳ್ಳುವ ಸಾಧ್ಯತೆ ಕಂಡು ಬಂದಾಗ ಅಲ್ಲಿಗೆ ವೇಣೂರು ಪೊಲೀಸರು ಆಗಮಿಸಿದ್ದಾರೆ.
ಬಳಿಕ ಪೊಲೀಸರು ಎರಡು ಕುಟುಂಬದವರನ್ನು ಹಾಗೂ ವಧು ವರರನ್ನು ಕೂರಿಸಿ ಮಾತುಕತೆ ನಡೆಸಿದ್ದಾರೆ ಈ ವೇಳೆ ವಧು ಗುರುತರ ಆರೋಪ ಮಾಡಿದ್ದು “ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ, ಈಗ ಮದುವೆಯಾಗುತ್ತಿರುವ ವರ ಬೇರೆಯವನೇ ಎಂದು ಹೇಳಿದ್ದಾಳೆ. ಈ ಅಚ್ಚರಿಯ ಹೇಳಿಕೆಯಿಂದ ವಿಷಯ ಇನ್ನಷ್ಟು ಕ್ಲಿಷ್ಟಕರವಾಗಿದೆ.
ವರ ಬೆಳ್ತಂಗಡಿ ನಿವಾಸಿಯಾಗಿದ್ದು, ವಧು ಮೂಡುಕೊಣಾಜೆ ನಿವಾಸಿ ಎಂದು ತಿಳಿದು ಬಂದಿದೆ. ವಿವಾಹವು ನಾರಾವಿ ದೇವಸ್ಥಾನದ ಸಮೀಪದ ಸಭಾಭವನದಲ್ಲಿ ನಿಗದಿಯಾಗಿತ್ತು.