ಸಮಗ್ರ ನ್ಯೂಸ್: ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಈಗಲೂ ಕೃಷ್ಣಾ ನದಿ ದಾಟಲು ಸೇತುವೆ ಇಲ್ಲದೆ ತೆಪ್ಪಗಳ ಮೂಲಕ ಜೀವಭಯದಲ್ಲಿ ಸಾಗುತ್ತಾರೆ. 20 ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದರೂ ಪ್ರಯೋಜನವಾಗದೆ ಇದೀಗ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
ಶಾಲೆ ಆರಂಭವಾಯಿತು ಅಂದರೆ ಸಾಕು ಮಕ್ಕಳಿಗೆ ಹಾಗೂ ಪೋಷಕರಿಗೆ ಜೀವಭಯ ಕಾಡಲು ಆರಂಭವಾಗುತ್ತದೆ. ಮೊಸಳೆಗಳು, ಪ್ರವಾಹ, ಬಿರುಗಾಳಿ ಎಂಬ ಭಯದ ನಡುವೆ ತೆಪ್ಪಗಳ ಮೂಲಕ ಸಾಗುತ್ತಾರೆ. ಸದ್ಯ ಶಾಲಾ ಕಾಲೇಜುಗಳು ಅರಂಭವಾಗಿದ್ದು, ಮತ್ತೆ ಮಕ್ಕಳ ಸ್ಥಿತಿ ಕರಾಳತೆಗೆ ಜಾರಿದೆ. ತೆಪ್ಪಗಳ ಮೂಲಕವೇ ಶಾಲಾ ಕಾಲೇಜುಗಳಿಗೆ ಮಕ್ಕಳು ಓಡಾಡುತ್ತಿದ್ದಾರೆ. ಒಂದೆಡೆ ಸುರಕ್ಷಿತವಾಗಿ ಶಾಲಾ ಕಾಲೇಜುಗಳಿಗೆ, ಮನೆಗಳಿಗೆ ತಲುಪುತ್ತೇವೋ ಎಂಬ ಭಯ, ಇನ್ನೊಂದೆಡೆ ಐದು ನಿಮಿಷ ವಿಳಂಬವಾದರೂ ತರಗತಿಗಳು ತಪ್ಪಿಹೋಗುತ್ತವೆ. ಇವರ ಸ್ಥಿತಿ ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ಎದುರಾಗಿದೆ.
ಕಳೆದ 20 ವರ್ಷಗಳಿಂದ ಹೋರಾಟ ನಡೆಸಿದರೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸದೆ ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಳ್ಳಿ ಜನರು, “ಜೀವ ಕೈಯಲ್ಲಿ ಹಿಡಿದುಕೊಂಡು ಓಡಾದ್ತಿದ್ದಿವಿ ಸಾರ್, ರಾಜ್ಯದಿಂದ ಕೈಬಿಡಿ, ನಾವು ತೆಲಂಗಾಣಕ್ಕೆ ಸೇರಿಕೊಳ್ತಿವಿ. ಕಳೆದ 20 ವರ್ಷಗಳಿಂದ ಹೋರಾಟ ನಡೆಸಿದರೂ ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ. ಕೂಡಲೇ ಕ್ರಮಕ್ಕೆ ಮುಂದಾಗದಿದ್ದರೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು, ಮೊಸಳೆಗೆ ಆಹಾರ ಅನ್ನೊ ಚಳುವಳಿ ಆರಂಭಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕಿದೆ.