ಸಮಗ್ರ ನ್ಯೂಸ್: ರಾಜ್ಯದಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕದ ಪಾಠಗಳ ಪರಿಷ್ಕರಣಾ ವಿವಾದಕ್ಕೆ ಇನ್ನೊಂದು ತಿರುವು ಸಿಕ್ಕಿದ್ದು, ಸಾಹಿತಿ ದೇವನೂರ ಮಹಾದೇವ ತನ್ನ ಲೇಖನಗಳನ್ನು ಪ್ರಕಟಿಸದಂತೆ ಪ್ರಕಟಣೆ ಹೊರಡಿಸಿದ್ದಾರೆ.
ಈ ಹಿಂದೆ ಎಡಪಂಥೀಯ ಒಲವಿನ ಸಾಹಿತಿಗಳು ಒಂದಷ್ಟು ಮಂದಿ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಸಲುವಾಗಿ ಪ್ರಶಸ್ತಿಯನ್ನು ಹಿಂದಿರುಗಿಸಿ ಗಮನ ಸೆಳೆದಿದ್ದರು. ಈಗ ಅದೇ ವಲಯದ ಕೆಲವರು ಪಠ್ಯ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಪಾಠ ವಾಪಾಸಾತಿಗೆ ಮುಂದಾಗಿದ್ದಾರೆ.
ನಿಟ್ಟಿನಲ್ಲಿ ಸಾಹಿತಿ ದೇವನೂರ ಮಹಾದೇವ ಅವರು ತಮ್ಮ ಪಾಠವನ್ನು ಹಿಂಪಡೆಯುವ ಇಂಗಿತ ವ್ಯಕ್ತಪಡಿಸಿದ್ದಲ್ಲದೆ ಅನುಮತಿ ಕೂಡ ನಿರಾಕರಿಸಿದ್ದಾರೆ. ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ನನ್ನದೊಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಸೇರಿಸಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದಿರುವ ಅವರು ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ್ದ ಅನುಮತಿ ಕೂಡ ಹಿಂಪಡೆದಿದ್ದೇನೆ ಎಂದಿದ್ದಾರೆ.
ಡಾ.ಜಿ. ರಾಮಕೃಷ್ಣ ಎಂಬವರು ಈ ಬಗ್ಗೆ ನಂತರ ದನಿ ಎತ್ತಿದ್ದು, ತಮ್ಮ ಯಾವುದೇ ಬರಹವನ್ನು ಪಠ್ಯದಲ್ಲಿ ಅಳವಡಿಸಬೇಡಿ ಎಂದಿರುವ ಅವರು, ಯಾವುದಾದರೂ ಬರಹ ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ತಮ್ಮ ಅನುಮತಿ ಇರುವುದಿಲ್ಲ ಎಂದೂ ಹೇಳಿದ್ದಾರೆ.