ಸಮಗ್ರ ನ್ಯೂಸ್: ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳುವ ವಿಚಾರ ಸಂಬಂಧ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು. ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು. ಅದು ತಪ್ಪು’ ಎಂದು ಸದಾಶಿವನಗರ ನಿವಾಸದ ಬಳಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳಲು ವಿಶ್ವ ಹಿಂದೂ ಪರಿಷತ್ ನಾಯಕರು ಹಾಗೂ ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರ ವೈಯಕ್ತಿಕ ನಂಬಿಕೆ, ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಇದರಿಂದ ರಾಜ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.