ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ತಾಂಬೂಲ ಪ್ರಶ್ನೆ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದ್ದು, ಮಳಲಿ ಜುಮ್ಮಾ ಮಸೀದಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಆಯುಕ್ತ ಎನ್.ಶಶಿಕುಮಾರ್ ಖುದ್ದು ನಿಗಾ ವಹಿಸಿದ್ದು, ನಿನ್ನೆ ರಾತ್ರಿ 8 ಗಂಟೆಯಿಂದ ನಾಳೆ ಬೆಳಗ್ಗೆ 8 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತೆ ನೀಡಲಾಗಿದ್ದು, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಬಂದ್ ಮಾಡಲಾಗಿದೆ. ಕೈಕಂಬ ಕಡೆಯಿಂದ ಜೋಡುತಡಮೆ ರಸ್ತೆಯವರೆಗೆ ನಿಷೇಧಿತ ಪ್ರದೇಶವಾಗಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ.
ಶಸ್ತ್ರ, ಮಾರಕಾಯುಧ ಹಿಡಿದು ಯಾರೂ ತಿರುಗಾಡುವಂತಿಲ್ಲ, ಪಟಾಕಿ ಮುಂತಾದ ಸ್ಫೋಟಕಗಳನ್ನು ಸಿಡಿಸುವಂತಿಲ್ಲ. ಯಾವುದೇ ವ್ಯಕ್ತಿಗಳ ಪ್ರತಿಕೃತಿಯನ್ನು ಪ್ರದರ್ಶಿಸುವಂತಿಲ್ಲ, ಯಾರದ್ದೇ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ತಾಂಬೂಲ ಪ್ರಶ್ನೆ ಕುತೂಹಲ ಮೂಡಿಸಿದ್ದು, ಮಂಗಳೂರಿನ ಗಂಜಿಮಠ ರಸ್ತೆಯಲ್ಲಿರುವ ಮಸೀದಿ ಇದ್ದು, ಮಸೀದಿಯ ಅನತಿ ದೂರದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ತಾಂಬೂಲ ಪ್ರಶ್ನೆ ನಡೆಯುತ್ತಿದೆ. ಮಸೀದಿಯ 250 ಮೀಟರ್ ದೂರದಲ್ಲಿ ದೈವಿ ಶಕ್ತಿ ಪತ್ತೆ ಕಾರ್ಯ ಮಾಡಲಾಗುತ್ತದೆ.
ಕೇರಳ ಮೂಲದ ಪೊದುವಾಲ್ ಕರೆಸಿ ತಾಂಬೂಲ ಪ್ರಶ್ನೆ ಮಾಡಲಾಗುತ್ತಿದ್ದು, ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ತಾಂಬೂಲ ಪ್ರಶ್ನೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮಸೀದಿ ಸುತ್ತಮುತ್ತ ದೈವ ಶಕ್ತಿ ಇದ್ಯಾ ಎಂಬ ಪ್ರಶ್ನೆ,ವೀಳ್ಯದೆಲೆಗಳ ಲೆಕ್ಕಾಚಾರ..ಗ್ರಹಗತಿಗಳ ಚಲನೆ ಮೇಲೆ ದೈವಿ ಶಕ್ತಿ ಪತ್ತೆಯಾಗಲಿದೆ.