ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಹಾಗೂ ಉಡುಪಿ ಜಿಲ್ಲೆಯಲ್ಲಿ 4 ಸೇರಿದಂತೆ ಒಟ್ಟು 18 ಹೊಸ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಶಿಕ್ಷಣ ಸಂಸ್ಥೆ/ಟ್ರಸ್ಟ್‌ಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಸರಕಾರ ಒಪ್ಪಿಗೆ ನೀಡಿದರೆ, ಒಟ್ಟು 14 ಪಿಯು ಕಾಲೇಜುಗಳು ಈ ಶೈಕ್ಷಣಿಕ ವರ್ಷದಿಂದ ಚಟುವಟಿಕೆ ಆರಂಭಿಸುವ ನಿರೀಕ್ಷೆಯಿದೆ.
ದ.ಕ. ಜಿಲ್ಲೆಯ ಅಡ್ಡೂರು, ಸೂರಿಂಜೆ, ಬಜಪೆ, ಕಿನ್ನಿಗೋಳಿ, ಪುತ್ತೂರು, ಉಡುಪಿಯ ಕಾಪು, ಕಟಪಾಡಿ, ವಕ್ವಾಡಿ ಒಳಗೊಂಡಂತೆ 18 ಕಡೆಗಳಲ್ಲಿ ಹೊಸ ಪ್ರಸ್ತಾವನೆ ಸಲ್ಲಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ 197 ಹಾಗೂ ಉಡುಪಿಯಲ್ಲಿ 105 ಪದವಿಪೂರ್ವ ಕಾಲೇಜುಗಳಿದ್ದು, ಇದರಲ್ಲಿ ದ.ಕ. 99 ಹಾಗೂ ಉಡುಪಿಯಲ್ಲಿ 45 ಅನುದಾನರಹಿತ ಕಾಲೇಜುಗಳಿವೆ. ಉಡುಪಿಯಲ್ಲಿ ಕಳೆದ ವರ್ಷ 2 ಹೊಸ ಪದವಿ ಕಾಲೇಜಿಗೆ ಅನುಮತಿ ಸಿಕ್ಕಿದ್ದರೆ, ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿ ಯಾವುದೇ ಹೊಸ ಕಾಲೇಜು ಆರಂಭವಾಗಿರಲಿಲ್ಲ.
ಸೇರ್ಪಡೆಗೆ ಹೆಚ್ಚಿನ ಒತ್ತಡ
ಈ ಬಾರಿ ಎಸೆಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಾದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪಿಯು ಕಾಲೇಜು ಆರಂಭಕ್ಕೆ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.
2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಚಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆ/ಟ್ರಸ್ಟಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಸುವವರು ಅಧಿಕೃತವಾಗಿ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಸಂಸ್ಥೆ/ಟ್ರಸ್ಟ್‌ನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರಬಾರದು. ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರು ಇರಬೇಕು ಎಂಬಿತ್ಯಾದಿ ನಿಯಮಾವಳಿಗಳಿವೆ. ಇದರಂತೆ 18 ಶಿಕ್ಷಣ ಸಂಸ್ಥೆಯಿಂದ ಅರ್ಜಿ ಸಲ್ಲಿಕೆಯಾಗಿದೆ.